ಗೊರಖ್ ಪುರ: ಭೂ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ವಿಶೇಷ ತಂಡಗಳನ್ನು ರಚಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.ಭೂಮಿಯ ಹಕ್ಕುದಾರರಿಗೆ ರಕ್ಷಣೆ ನೀಡಬೇಕು ಮತ್ತು ಅಕ್ರಮ ಒತ್ತುವರಿ ಮಾಡಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಗುಡುಗಿದ್ದಾರೆ.ಗೊರಖನಾಥ ದೇವಸ್ಥಾನದಲ್ಲಿ ನಡೆದ ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರ ಅಹವಾಲುಗಳನ್ನು ಆಲಿಸಿದ ನಂತರ ಅವರು ಈ ಸೂಚನೆ ನೀಡಿದರು.ಪ್ರಭಾವಿ ವ್ಯಕ್ತಿಗಳು ಯಾರಾದರೂ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ, ಕೂಡಲೇ ಅದನ್ನು ಮುಕ್ತಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಕ್ರಮ ಒತ್ತುವರಿದಾರರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಹೇಳಿದರು.
ವೈದ್ಯಕೀಯ ನೆರವು: ಚಿಕಿತ್ಸೆಗಾಗಿ ಧನಸಹಾಯ ಕೋರಿ ಬಂದಜನರಿಗೆ ಮುಖ್ಯಮಂತ್ರಿಗಳು ಪೂರ್ಣ ಬೆಂಬಲದ ಭರವಸೆ ನೀಡಿದರು. ಆಸ್ಪತ್ರೆಗಳ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪೊಲೀಸ್ ಇಲಾಖೆಗೆ ಎಚ್ಚರಿಕೆ: ದೂರುದಾರರೊಂದಿಗೆ ಸಂವೇದನಾ ಶೀಲವಾಗಿ ವರ್ತಿಸಬೇಕು. ಪ್ರತಿಯೊಂದು ಪ್ರಕರಣವನ್ನೂ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು ಎಂದು ಪೊಲೀಸರಿಗೆ ತಾಕೀತು ಮಾಡಿದರು.ಪ್ರತಿ ನಾಗರಿಕನಿಗೆ ನ್ಯಾಯ ದೊರಕಿಸಿಕೊಡುವುದು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.












































