ಪುತ್ತೂರು:ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಹಣಕಾಸಿನ ದುರುಪಯೋಗದ ಕುರಿತು ಬಂದ ದೂರು ಅರ್ಜಿಗಳಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ತನಿಖೆ ನಡೆಸಿ ವರದಿ ನೀಡುವ ಸಲುವಾಗಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಜಯಮ್ಮ ಅವರು ಅ.16ರಂದು ದೇವಳಕ್ಕೆ ಆಗಮಿಸಿ ದೂರು ಅರ್ಜಿದಾರರ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಕಾರ್ಯನಿರ್ವಹಣಾಧಿಕಾರಿಯವರಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಇಲಾಖಾ ನಿಯಮಗಳನ್ನು ಉಲ್ಲಂಸಿ ರಚಿಸಿರುವ ಅಭಿವೃದ್ಧಿ ಸಮಿತಿಯ ಅನುಮೋದನೆ ಮಾಡುವುದನ್ನು ತಡೆಹಿಡಿಯಲು ಮತ್ತು ಈ ಸಮಿತಿಯಿಂದ ನಿರ್ವಹಿಸಿದ ಕಾಮಗಾರಿಗಳ ತನಿಖೆ ನಡೆಸಿ, ಅಭಿವೃದ್ಧಿ ಸಮಿತಿ ರದ್ದು ಮಾಡಬೇಕು.ದೇವಾಲಯದ ಜಮೀನಿನ ಉತ್ತರ ದಿಕ್ಕಿನಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ರಸ್ತೆ ನಿರ್ಮಾಣದ ಕಾಮಗಾರಿಯನ್ನು ಇಲಾಖೆಯ ಯಾವುದೇ ಪೂರ್ವ ಅನುಮತಿ/ಅನುಮೋದನೆ ಇಲ್ಲದೆ ಕೈಗೊಂಡಿರುವುದನ್ನು ತಡೆಹಿಡಿದು ದೇವಸ್ಥಾನದ ಆಸ್ತಿಯ ಮತ್ತು ದೇವಳದ ಪಾವಿತ್ರ್ಯತೆ ರಕ್ಷಣೆ ಮಾಡಬೇಕು. ಇವುಗಳ ತನಿಖೆ ನಡೆಸಿ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಭಕ್ತಾದಿಗಳು ಹಿಂದೂ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರಿಗೆ ದೂರು ನೀಡಿದ್ದರು.
ದೂರು ಅರ್ಜಿ ನೀಡಿದವರನ್ನು ಕರೆಸಿ ಅವರ ಹೇಳಿಕೆ ಪಡೆಯಲಾಯಿತು.ದೇವಳದ ಕಚೇರಿಯ ಅನ್ನಛತ್ರದ ಸಭಾಭವನದಲ್ಲಿ ದೂರು ಅರ್ಜಿದಾರರನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕರೆಸಿ ಅವರ ಹೇಳಿಕೆಯನ್ನು ಪಡೆಯಲಾಯಿತು.ವಿಶ್ವಹಿಂದು ಪರಿಷದ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಸತೀಶ್ ಬಿ.ಎಸ್, ನ್ಯಾಯವಾದಿ ವಿರೂಪಾಕ್ಷ ಭಟ್ ಮಚ್ಚಿ ಮಲೆ ಕೆಲವೊಂದು ದಾಖಲೆಗಳನ್ನು ಮುಂದಿಟ್ಟು ತಮ್ಮ ಹೇಳಿಕೆಯನ್ನು ನೀಡಿದರು.ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಅವರು ಪತ್ನಿ ಸುಧಾ ಅವರ ಹೆಸರಿನಲ್ಲಿ ಅರ್ಜಿ ನೀಡಿದ್ದರು. ರಸ್ತೆ ಮಾಡುತ್ತೇವೆ ಎನ್ನುವ ಜಾಗಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇರುತ್ತದೆ.ನಾನು ದೇವಸ್ಥಾನದ ಚಾಕ್ರಿಯವಳಾಗಿದ್ದು,ದೇವಸ್ಥಾನದ ಜಾಗದಲ್ಲಿ ಮನೆ ಕಟ್ಟಿ ವಾಸವಿದ್ದೆ.ದೇವಳದ ಕಮಿಟಿಯವರು ನನ್ನ ಮತ್ತು ಇತರರ ಮನೆಯನ್ನು ಬಲತ್ಕಾರವಾಗಿ ದೂಡಿ ಹಾಕಿದ್ದಾರೆ.ಇದಕ್ಕೆ ಸಂಬಂಧಿಸಿ ನಾನು ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅದೆ ರೀತಿ ಎಸ್.ಎನ್.ಪ್ರಸಾದ್ ಅವರು ಉಚ್ಚನ್ಯಾಯಾಲಯದಲ್ಲಿ ರಿಟ್ ಪಿಟೀಷನ್ ಹಾಕಿದ್ದಾರೆ.ಅಲ್ಲಿಯೂ ತಡೆಯಾ ಇದೆ. ಹಾಗಾಗಿ ಇದು ಇತ್ಯರ್ಥವಾಗದೆ ಯಾವುದೆ ಕಾಮಗಾರಿಗೆ ಅನುಮತಿ ನೀಡಬಾರದು ಎಂದು ಸುಧಾ ಅವರ ಹೆಸರಿನ ಅರ್ಜಿಯಲ್ಲಿ ಕೋರಲಾಗಿದೆ.ದೂರು ಅರ್ಜಿದಾರರ ಹೇಳಿಕೆ ಪಡೆದ ಸಹಾಯಕ ಆಯುಕ್ತರು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಕಾರ್ಯನಿರ್ವಹಣಾಕಾರಿಯವರ ಹೇಳಿಕೆಯನ್ನೂ ಪಡೆದುಕೊಂಡಿದ್ದಾರೆನ್ನಲಾಗಿದೆ.ಕುಡುಪು ದೇವಸ್ಥಾನದ ಕಾರ್ಯನಿರ್ವಹಣಾಕಾರಿ ಪ್ರವೀಣ್ ಅವರು ಜಯಮ್ಮ ಅವರ ಜೊತೆಗಿದ್ದರು.
ಧಾರ್ಮಿಕ ದತ್ತಿ ಇಲಾಖೆಗೆ ವರದಿ ಸಲ್ಲಿಸುತ್ತೇವೆವಿಚಾರಣೆಯ ಕುರಿತು ಹೇಳಲಾಗುವುದಿಲ್ಲ.ದೂರು ಅರ್ಜಿದಾರರ ಹೇಳಿಕೆ ಪಡೆದು ಅದನ್ನು ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸುತ್ತೇವೆ.ಈ ಹಂತದಲ್ಲಿ ಮಾಧ್ಯಮಕ್ಕೆ ವಿಚಾರ ತಿಳಿಸಲು ಆಗುವುದಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಜಯಮ್ಮ ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.










































