ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಸನಿಹದಲ್ಲಿ ಟೋಲ್ ಪ್ಲಾಝಾ ಕಾಮಗಾರಿ ಪೂರ್ಣಗೊಂಡಿದ್ದು, ಪರೀಕ್ಷಾ ಸೇವೆ ಆರಂಭಗೊಂಡಿದೆ. ವಾರದೊಳಗೆ ಹೆದ್ದಾರಿ ಪ್ರಾಧಿಕಾರದಿಂದ ಅಧಿಕೃತ ಪ್ರಕಟಣೆ ಆದ ಬಳಿಕ ಶುಲ್ಕ ವಸೂಲಿ ಆರಂಭವಾಗುವ ಸಾಧ್ಯತೆಯಿದೆ.

ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ತನಕದ ಚತುಷ್ಪಥ ಕಾಮಗಾರಿ ಶೇಕಡಾ 95ರಷ್ಟು ಪೂರ್ಣಗೊಂಡಿದೆ. ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಮಧ್ಯೆ ಟೋಲ್‌ಗೇಟ್ ನಿರ್ಮಾಣಗೊಂಡಿದೆ. ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯೆ 46 ಕಿ.ಮೀ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಟೋಲ್ ಪ್ಲಾಝಾ ಕಾಮಗಾರಿಯನ್ನು ಪೂರ್ಣಗೊಳಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ.


ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಕಡೆ ತಲಾ ನಾಲ್ಕು ಲೇನ್‌ಗಳಿವೆ. ಒಂದೇ ಸಮಯಕ್ಕೆ ಎರಡು ಬದಿ ಒಟ್ಟು 8 ಲೇನ್‌ಗಳಲ್ಲಿ ವಾಹನ ಸಾಗಲಿದೆ. ದ್ವಿಚಕ್ರ ಹಾಗೂ ರಿಕ್ಷಾಗಳಿಗೆ ಎರಡೂ ಬದಿ ಪ್ರತ್ಯೇಕ ಲೇನ್‌ಗಳಿವೆ. ಶುಲ್ಕ ಸಂಗ್ರಹ ಟೆಂಡರ್ ಪೂರ್ಣಗೊಂಡಿದ್ದು, ಮಂಗಳೂರಿನ ಕೋರಲ್ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ.ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರು-ಮಂಗಳೂರು ಮಧ್ಯೆ ಈಗಾಗಲೇ 5 ಟೋಲ್ ಪ್ಲಾಝಾಗಳಿವೆ.


ದ.ಕ. ಜಿಲ್ಲೆಯಲ್ಲಿ ಗುಂಡ್ಯ-ಪಂಪ್‌ವೆಲ್ ಮಧ್ಯೆ ಬ್ರಹ್ಮರಕೂಟ್ಲುನಲ್ಲಿ ಟೋಲ್ ಪ್ಲಾಝಾ ಇದ್ದು, ವಳಾಲುನಲ್ಲಿರುವುದು 2ನೇಯದ್ದಾಗಿದೆ. ಹೀಗಾಗಿ ಮುಂದೆ ಬೆಂಗಳೂರು-ಮಂಗಳೂರು ಮಧ್ಯೆ 7 ಟೋಲ್ ಪ್ಲಾಝಾಗಳಲ್ಲಿ ಶುಲ್ಕ ತೆರಬೇಕಾಗುತ್ತದೆ.


ಸ್ಥಳೀಯರಿಗೆ ಮಾಸಿಕ ಪಾಸ್: ಇಕ್ಕಡೆಯ 8 ಲೇನ್‌ಗಳ ಪೈಕಿ 6 ಲೇನ್‌ಗಳು ಫಾಸ್ಟ್‌ಟ್ಯಾಗ್ ಮಾತ್ರಕ್ಕೆ, 2 ಲೇನ್‌ಗಳು ಕ್ಯಾಶ್ ಪ್ಲಸ್ ಫಾಸ್ಟ್‌ಟ್ಯಾಗ್‌ಗೆ ಇರಲಿವೆ. ನಗದು ವ್ಯವಸ್ಥೆ ಇರುವುದಿಲ್ಲ, ಫೋನ್ ಪೇ, ಗೂಗಲ್ ಪೇ ಸ್ಕ್ಯಾನ್‌ಗೆ ಮಾತ್ರ ಅವಕಾಶ. ದ.ಕ. ಜಿಲ್ಲೆಯ ನೋಂದಣಿ ವಾಹನಗಳಿಗೆ ಶೇಕಡಾ 50ರಷ್ಟು ವಿನಾಯಿತಿ ದರ ನಿಗದಿ.
ಶುಲ್ಕ ಕೇಂದ್ರದಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳಿಗೆ ₹360 ಮಾಸಿಕ ಪಾಸ್ ವ್ಯವಸ್ಥೆ ಇರುತ್ತದೆ ಎಂದು ಕೋರಲ್ ಸಂಸ್ಥೆಯ ಯಜ್ಞೇಶ್ ತಿಳಿಸಿದ್ದಾರೆ.









































