
ನವದೆಹಲಿ: ಸಂಸತ್ ಭವನದ ಅನೆಕ್ಸ್‌ನಲ್ಲಿ ಇಂದು ಶ್ರೀರಂಗ ಅಪ್ಪಾ ಬಾರ್ನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಇಂಧನ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಭಾಗವಹಿಸಿದರು.

‘ವಿದ್ಯುತ್ ವಿತರಣಾ ವಲಯದ ಬಲವರ್ಧನೆ – ಪರಿಷ್ಕೃತ ವಿತರಣಾ ವಲಯ ಯೋಜನೆ’ (RDSS) ಕುರಿತು ಇಂಧನ ಸಚಿವಾಲಯ ಮತ್ತು ಪಿಎಫ್‌ಸಿ (PFC) ಲಿಮಿಟೆಡ್‌ನ ಪ್ರತಿನಿಧಿಗಳು ಸಭೆಗೆ ವಿವರವಾದ ಮಾಹಿತಿ ನೀಡಿದರು.

ಈ ವೇಳೆ ಪ್ರಮುಖವಾಗಿ ವಿದ್ಯುತ್ ವಿತರಣೆಯಲ್ಲಿ ಆಗುತ್ತಿರುವ ಒಟ್ಟು ತಾಂತ್ರಿಕ ಮತ್ತು ವಾಣಿಜ್ಯ ನಷ್ಟಗಳ (AT&C Losses) ನಿಯಂತ್ರಣ, ವಿತರಣಾ ವ್ಯವಸ್ಥೆಯ ಆಧುನೀಕರಣ ಹಾಗೂ ಸ್ಮಾರ್ಟ್ ಮೀಟರ್ ವ್ಯವಸ್ಥೆಯನ್ನು ದೇಶಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಗ್ರಾಹಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ, ವಿದ್ಯುತ್ ಕಳವು ತಡೆಗಟ್ಟುವಿಕೆ ಹಾಗೂ ವಿತರಣಾ ಕಂಪನಿಗಳ ಆರ್ಥಿಕ ಸದೃಢತೆ ಕುರಿತು ಸಭೆಯಲ್ಲಿ ಸಮಿತಿ ಸದಸ್ಯರು ಅಧಿಕಾರಿಗಳಿಂದ ಮಾಹಿತಿ ಪಡೆದು ಸಲಹೆಗಳನ್ನು ನೀಡಿದರು.












































