ಕೋಲ್ಕತ್ತಾ: ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು, ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ನಟ ಹಾಗೂ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ (Mithun Chakraborty) ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆ (Waqf (Amendment) Act) ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದ ಒಂದು ವಾರದ ಬಳಿಕ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದೇನೆ, ಈಗಲೂ ಗೃಹಸಚಿವರಿಗೆ ಮನವಿ ಮಾಡುತ್ತಿದ್ದೇನೆ. ಕನಿಷ್ಠ ಪಕ್ಷ ಚುನಾವಣೆ ಸಂದರ್ಭದಲ್ಲಿ 2 ತಿಂಗಳ ಕಾಲ ಮಿಲಿಟರಿಯನ್ನಾದರೂ ನಿಯೋಜಿಸಿ, ಆಗ ನ್ಯಾಯಯುತ ಚುನಾವಣೆ ನಡೆಯುತ್ತದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋನಲ್ಲಿ ಮನವಿ ಮಾಡಿದ್ದಾರೆ.
ಇದೇ ಏಪ್ರಿಲ್ 8 ರಿಂದ 12ರ ವರೆಗೆ ಮುಸ್ಲಿಂ-ಬಹುಸಂಖ್ಯಾತ ಪಟ್ಟಣಗಳಾದ ಶಂಶರ್‌ಗಂಜ್, ಸುತಿ, ಧುಲಿಯನ್ ಮತ್ತು ಜಂಗೀಪುರದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಹಸ್ರಾರು ಸಂಖ್ಯೆಯ ಮುಸ್ಲಿಮರು ಪ್ರತಿಭಟನೆಗಿಳಿದಿದ್ದರು. ಪ್ರತಿಭಟನೆ ಹಿಂಸಾಚಾರಾಕ್ಕೆ ತಿರುಗಿದ ಬಳಿಕ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು, ಅಲ್ಲದೇ ಹಿಂಸಾಚಾರದಿಂದಾಗಿ ಜೀವ ಹಾಗೂ ಮಾನ ಭಯದಿಂದ ನೂರಾರು ಹಿಂದೂ ಕುಟುಂಬಗಳು ಮನೆಗಳನ್ನು ತೊರೆದು ಹೋಗಿದ್ದವು, ಪರಿಸ್ಥಿತಿ ಕೊಂಚ ತಣ್ಣಗಾಗುತ್ತಿದ್ದಂತೆ ಕೆಲ ಕುಟುಂಬಗಳು ತಮ್ಮ ಸ್ಥಾನಕ್ಕೆ ಮರಳಿದ್ದವು. ಈ ಬೆನ್ನಲ್ಲೇ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಆಗ್ರಹ ಕೇಳಿಬಂದಿದೆ.
ಹಿಂಸಾಚಾರ ಪೀಡಿತ ಪ್ರದೇಶಕ್ಕೆ ರಾಜ್ಯಪಾಲರ ಭೇಟಿ:ಹಿಂಸಾಚಾರ ಪ್ರತಿಭಟನೆ ತೀವ್ರಸ್ವರೂಪ ಪಡೆಯುತ್ತಿದ್ದಂತೆ ಪಶ್ಚಿಮ ಬಂಗಾಳ ರಾಜ್ಯಪಾಲರು ಮುರ್ಷಿದಾಬಾದ್‌ನ ಶಂಶೇರ್‌ಗಂಜ್, ಧುಲಿಯನ್, ಸುತಿ ಮತ್ತು ಜಂಗೀಪುರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಜೊತೆಗೆ ಮಾಲ್ಡಾದ ಶಾಲೆಯೊಂದರ ಪರಿಹಾರ ಶಿಬಿರಕ್ಕೆ ಸ್ಥಳಾಂತರಗೊಂಡಿದ್ದ ಕುಟುಂಬಗಳನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಮಹಿಳೆಯರು ತಮ್ಮ ಮೇಲೆ ದೈಹಿಕ ಹಲ್ಲೆ, ದೌರ್ನಜ್ಯ ನಡೆಸಿರುವುದಾಗಿ ಹೇಳಿಕೊಂಡಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ವಿಜಯಾ ರಹತ್ಕರ್ ನೇತೃತ್ವದ ತಂಡವು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಸಂತ್ರಸ್ತ ಮಹಿಯರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದೆ.













































