ತಿರುವನಂತಪುರ: ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ಕೊಚ್ಚಿಗೆ ವೈಯಕ್ತಿಕ ಪ್ರವಾಸಕ್ಕಾಗಿ ರಾಜ್ಯ ಸರಕಾರದ ಹೆಲಿಕಾಪ್ಟರ್ ಬಳಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ. ಮುಖ್ಯವಾಗಿ ಏರ್ ಆಂಬುಲೆನ್ಸ್ ಆಗಿ ಬಳಸಲು ಮತ್ತು ತುರ್ತು ಕಾರ್ಯಾಚರಣೆಗಳಿಗಾಗಿ ಬಾಡಿಗೆಗೆ ಪಡೆಯಲಾದ ಹೆಲಿಕಾಪ್ಟರ್ ಅನ್ನು ಚಿಕಿತ್ಸೆ ಪಡೆಯುತ್ತಿರುವ ತನ್ನ ಮಾವನನ್ನು ಭೇಟಿಯಾಗಲು ಸತೀಶನ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ.ಜುಲೈ 31ರಂದು ಸತೀಶನ್ ತಿರುವನಂತಪುರದ ಗಾಲ್ಫ್ ಕ್ಲಬ್ ಹೆಲಿಪ್ಯಾಡ್ನಿಂದ ಕೊಚ್ಚಿಗೆ ಪ್ರಯಾಣಿಸಲು ಯತ್ನಿಸಿದ್ದರು ಎಂಬ ವರದಿಗಳು ಈ ವಿವಾದಕ್ಕೆ ಮೂಲವಾಗಿವೆ. ವರದಿಗಳ ಪ್ರಕಾರ, ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಕೊಚ್ಚಿಯಲ್ಲಿ ಇಳಿಯಲು ಸಾಧ್ಯವಾಗದೆ ತಿರುವನಂತಪುರಕ್ಕೆ ಮರಳಿತ್ತು. ನಂತರ ಈ ಪ್ರಯಾಣವನ್ನು ಪೂರ್ಣಗೊಳಿಸಲಾಯಿತು.
ಫೇಸ್ಟುಕ್ ಪೋಸ್ಟಲ್ಲಿ ಮುಖ್ಯಮಂತ್ರಿಯನ್ನು ಟೀಕಿಸಿರುವ ಮಾಜಿ ಸಚಿವ ಹಾಗೂ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಂ.ಬಿ. ರಾಜೇಶ್, ಹೆಲಿಕಾಪ್ಟರ್ ಪ್ರವಾಹ ಪರಿಹಾರ ಅಥವಾ ಯಾವುದೇ ಅಧಿಕೃತ ಕರ್ತವ್ಯಕ್ಕೆ ಬಳಕೆಯಾಗುವ ಬದಲು ವೈಯಕ್ತಿಕ ಕಾರಣಕ್ಕಾಗಿ ತಿರುವನಂತಪುರದಿಂದ ಕೊಚ್ಚಿಗೆ ಎರಡು ಬಾರಿ ಹಾರಾಟ ನಡೆಸಿದೆ ಎಂದು ಆರೋಪಿಸಿದ್ದಾರೆ.ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, ಈ ಘಟನೆಯ ಬಗ್ಗೆ ಸಾರ್ವಜನಿಕ ಆಕ್ರೋಶ ಅಥವಾ ಪ್ರೈಮ್-ಟೈಮ್ ಚರ್ಚೆಗಳು ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಮ್ಯುನಿಸ್ಟ್ ಮುಖ್ಯಮಂತ್ರಿಯೊಬ್ಬರು ಇದೇ ರೀತಿಯ ಪ್ರಯಾಣ ಮಾಡಿದ್ದರೆ ಮಾಧ್ಯಮಗಳು ‘ನೈತಿಕ ಆಕ್ರೋಶ’ದೊಂದಿಗೆ ಪ್ರತಿಕ್ರಿಯಿಸುತ್ತಿದ್ದವು ಎಂದು ರಾಜೇಶ್ ಆರೋಪಿಸಿದ್ದಾರೆ.
ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ಸಿಪಿಎಂ ನಾಯಕ ವಿ. ಶಿವನ್ ಕುಟ್ಟಿ ಅವರೂ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೆಲಿಕಾಪ್ಟರ್ ನ ವೀಡಿಯೊವನ್ನು ಫೇಸ್ಟುಕ್ನಲ್ಲಿ ಹಂಚಿಕೊಂಡಿರುವ ಅವರು ‘ಕಾಲ ಬದಲಾದಂತೆ, ಹೆಲಿಕಾಪ್ಟರ್ ಹಾರುತ್ತದೆ…’ ಎಂದು ಬರೆದಿದ್ದಾರೆ.ಈ ನಡುವೆ ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಂಡಿರುವ ಆರೋಗ್ಯ ಸಚಿವ ಕೆ. ಮುರಳೀಧರನ್ ಅವರು ಹೆಲಿಕಾಪ್ಟರ್ ಬಳಕೆಯ ಕುರಿತು ಟೀಕೆಯನ್ನು ತಳ್ಳಿಹಾಕಿದ್ದಾರೆ.’ಕಾಲ ಬದಲಾದಂತೆ ಜನರು ಕಾರುಗಳ ಬದಲಿಗೆ ಹೆಲಿಕಾಪ್ಟರ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ತಪ್ಪೇನಿದೆ? ಯಾರೂ ಎಂದಿಗೂ ಹೆಲಿಕಾಪ್ಟರ್ ಬಳಕೆಯನ್ನು ವಿರೋಧಿಸಿಲ್ಲ’ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಈ ವಿವಾದವು ಸರಕಾರದ ಹೆಲಿಕಾಪ್ಟರ್ ಗೆ ಸಂಬಂಧಿಸಿದ ಹಳೆಯ ರಾಜಕೀಯ ಸಂಘರ್ಷದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ‘ಒಖಿ’ ಚಂಡಮಾರುತದಿಂದ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಆಗಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೆಲಿಕಾಪ್ಟರ್ ಬಳಸಿದ್ದನ್ನು ಟೀಕಿಸಿತ್ತು. ಎಲ್ಲಿಎಫ್ ಸರಕಾರವು ದುಂದುವೆಚ್ಚ ಮಾಡುತ್ತಿದೆ ಎಂದು ಅದು ಆರೋಪಿಸಿತ್ತು. ಆದರೆ ಹೆಲಿಕಾಪ್ಟರ್ನ್ನು ಅಧಿಕೃತ ವಿಪತ್ತು ನಿರ್ವಹಣಾ ಕರ್ತವ್ಯಗಳಿಗಾಗಿ ಬಳಸಲಾಗುತ್ತಿದೆ ಎಂದು ಸಿಪಿಎಂ ಸಮರ್ಥಿಸಿಕೊಂಡಿತ್ತು.








































