ಜಾಗತಿಕ ತೈಲ ಮಾರುಕಟ್ಟೆಗೆ ನಿಟ್ಟುಸಿರು: ಅಮೆರಿಕ-ಇರಾನ್ ನಡುವೆ ಶಾಂತಿ ಪ್ರಕ್ರಿಯೆ ಆರಂಭ

Picture of Savistara

Savistara

Bureau Report

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಮಿಲಿಟರಿ ಬಿಕ್ಕಟ್ಟಿನ ನಡುವೆ, ಇರಾನ್ ಜತೆ ನೇರ ರಾಜತಾಂತ್ರಿಕ ಚರ್ಚೆಗಳು ಆರಂಭವಾಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ದೃಢಪಡಿಸಿದ್ದಾರೆ. ಅನಗತ್ಯ ಪ್ರಾಣಹಾನಿ ತಡೆಯಲು ಹಾಗೂ ಶಾಂತಿ ಸ್ಥಾಪನೆಗೆ ಅವಕಾಶ ನೀಡಲು ಇರಾನ್ ಮೇಲಿನ ಬೃಹತ್ ಮಿಲಿಟರಿ ದಾಳಿಯನ್ನು ಅಮೆರಿಕ ತಾತ್ಕಾಲಿಕವಾಗಿ ತಡೆಹಿಡಿದಿದೆ.

ಗಲ್ಫ್ ನಾಯಕರ ಮಧ್ಯಸ್ಥಿಕೆ ಮತ್ತು ದಾಳಿ ಮುಂದೂಡಿಕೆ

ಇರಾನ್‌ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಅಮೆರಿಕ ಹಿಂಪಡೆಯಲು ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಯುಎಇ ಮತ್ತು ಕತಾರ್ ನಾಯಕರ ಸುದೀರ್ಘ ಸಂಭಾಷಣೆ ಪ್ರಮುಖ ಕಾರಣವಾಗಿದೆ. ಯುದ್ಧ ಉಲ್ಬಣಗೊಂಡರೆ ಗಲ್ಫ್ ಪ್ರದೇಶದ ಇಡೀ ಆರ್ಥಿಕತೆಯ ಮೇಲೆ ಉಂಟಾಗುವ ಗಂಭೀರ ಪರಿಣಾಮಗಳನ್ನು ತಪ್ಪಿಸಲು ಈ ನಾಯಕರು ಮನವಿ ಮಾಡಿದ್ದರು.

ಹಾರ್ಮುಜ್ ಜಲಸಂಧಿ ಮತ್ತು ತೈಲ ಪೂರೈಕೆ

ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್‌ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸುವುದು ಮತ್ತು ಇರಾನ್‌ನ ಪರಮಾಣು ಚಟುವಟಿಕೆಗಳಿಗೆ ತಡೆ ಒಡ್ಡುವುದು ಈ ಚರ್ಚೆಯ ಮುಖ್ಯ ಅಜೆಂಡಾವಾಗಿದೆ. ಇನ್ನು ಜಲಸಂಧಿಯ ನೌಕಾಯಾನ ಮಾರ್ಗದ ಭದ್ರತೆ ಕುರಿತು ಇರಾನ್ ಮತ್ತು ಓಮನ್ ದೇಶಗಳು ಪ್ರತ್ಯೇಕವಾಗಿ ಮಾತುಕತೆ ನಡೆಸುತ್ತಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಸಣ್ಣ ಚೇತರಿಕೆ

ಇಸ್ರೇಲ್ ಹಾಗೂ ಅಮೆರಿಕ ಪಡೆಗಳ ಸರಣಿ ಕಾರ್ಯಾಚರಣೆಯಿಂದ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಸ್ಥಗಿತಗೊಂಡು ತೈಲ ಬೆಲೆಗಳಲ್ಲಿ ಏರಿಕೆ ಕಂಡುಬಂದಿತ್ತು. ಪ್ರಸ್ತುತ ಶಾಂತಿ ಮಾತುಕತೆಯ ಭರವಸೆಯಿಂದ ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಸಣ್ಣ ಮಟ್ಟದ ಸುಧಾರಣೆ ಕಾಣಿಸಿಕೊಂಡಿದೆ.

[t4b-ticker]
error: Content is protected !!