ಅಲಿಗಢ: “ಎಲ್ಲರಿಗೂ ಒಂದೇ ದೇಗುಲ, ಒಂದೇ ಬಾವಿ,ಒಂದೇ ಸ್ಮಶಾನ’ ಎಂಬ ತತ್ವವನ್ನು ಪಾಲಿಸುವ ಮೂಲಕ ಹಿಂದೂ ಸಮುದಾಯವು ಸಾಮಾಜಿಕ ಸಾಮರಸ್ಯವನ್ನು ಆಲಂಗಿಸಿಕೊಳ್ಳಬೇಕು. ಆ ಮೂಲಕ ಜಾತಿ ತಾರತಮ್ಯಕ್ಕೆ ಅಂತ್ಯ ಹಾಡಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.ಉತ್ತರಪ್ರದೇಶದ ಅಲಿಗಢದಲ್ಲಿ 5 ದಿನಗಳ ಪ್ರವಾಸ ಕೈಗೊಂಡಿರುವ ಅವರು, ಎರಡು ಶಾಖಾಗಳಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿ ಸಾಮಾಜಿಕ ಏಕತೆಯ ಗುರಿಯನ್ನು ಸಾಧಿಸುವ ಮಹತ್ವವನ್ನು ಸಾರಿದ್ದಾರೆ. ಆರೆಸ್ಸೆಸ್‌ನ ಕಾರ್ಯಕರ್ತರೆಲ್ಲರೂ ಸಮಾಜದ ಎಲ್ಲ ವರ್ಗಗಳನ್ನೂ ತಲುಪಬೇಕು, ಎಲ್ಲ ವರ್ಗದವರನ್ನೂ ತಮ್ಮ ಮನೆಗಳಿಗೆ ಆಹ್ವಾನಿಸಬೇಕು. ಬೇರುಮಟ್ಟದಲ್ಲೇ ಸಾಮರಸ್ಯ ಮತ್ತು ಏಕತೆಯ ಸಂದೇಶವನ್ನು ಸಾರಬೇಕು ಎಂದಿದ್ದಾರೆ.ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ರಾಷ್ಟ್ರೀಯವಾದ ಮತ್ತು ಸಾಮಾಜಿಕ ಒಕ್ಕಟ್ಟಿನ ಅಡಿಪಾಯವನ್ನು ಬಲಿಷ್ಠಪಡಿಸಬೇಕು ಎಂದೂ ಸಲಹೆ ನೀಡಿದ್ದಾರೆ.
ಮೌಲ್ಯಗಳೇ ಭಾರತದ ಆಸ್ತಿ:
ಮೌಲ್ಯಗಳೇ ಭಾರತೀಯ ಸಮಾಜದ ಬಹುದೊಡ್ಡ ಆಸ್ತಿ ಎಂದು ಹೇಳಿರುವ ಭಾಗವತ್, ಸಂಘಟನೆಯ ಶತಮಾನೋತ್ಸವ ವರ್ಷದ ಅಂಗವಾಗಿ ಈ ವಿಷಯಗಳನ್ನು ಸಾಮಾಜಿಕ ಆಂದೋಲನವಾಗಿ ಆರೆಸ್ಸೆಸ್ ಆರಂಭಿಸಲಿದೆ. ಈ ವಿಷಯಗಳನ್ನು ಸಮಾಜಕ್ಕೆ ತಲುಪಿಸುವುದಕ್ಕಾಗಿ ಯೋಜನೆ ಮತ್ತು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದರು.













































