ನನ್ನ ಮಗಳ ಎದುರೇ ಭರತ್ ತಲೆಗೆ ಶೂಟ್ ಮಾಡಿದ್ರಂತೆ ಎಂದು ಭರತ್ ಅವರ ಅತ್ತೆ ವಿಮಲಾ ಅವರು ದುಃಖ ವ್ಯಕ್ತಪಡಿಸಿದರು.
ಬೆಂಗಳೂರು: ಉಗ್ರ ದಾಳಿಯಲ್ಲಿ ಸಾವನ್ನಪ್ಪಿರುವ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಕುಟುಂಬಸ್ಥರ ಗೋಳು ಹೇಳತೀರದಾಗಿದೆ. ಮತ್ತೊಂದೆಡೆ ವಿಶೇಷ ವಿಮಾನದಲ್ಲಿ ಭರತ್ ಅವರ ಪಾರ್ಥಿವ ಶರೀರ ಇಂದು ಸಂಜೆಯೊಳಗಾಗಿ ನಗರಕ್ಕೆ ತಲುಪಲಿದೆ. ಮೃತ ಭರತ್ ಅವರ ಅತ್ತೆ ವಿಮಲಾ ಈ ಬಗ್ಗೆ ಮಾತನಾಡಿದ್ದಾರೆ.”ನಿನ್ನೆ ಮಧ್ಯಾಹ್ನ 2:45ಕ್ಕೆ ಮಗಳು ಸುಜಾತಾ ಕರೆ ಮಾಡಿ ದುರಂತದ ಬಗ್ಗೆ ತಿಳಿಸಿದಳು. ಭರತ್ ಐಟಿ ಕಂಪನಿಯಲ್ಲಿ ಮೊದಲು ಕೆಲಸ ಮಾಡುತ್ತಿದ್ದ. ಮದುವೆಯಾಗಿ ಐದು ವರ್ಷವಾಗಿತ್ತು. ಅಧಾರ್ ಕಾರ್ಡ್ ತೋರಿಸುವಂತೆ ಹೇಳಿ ಉಗ್ರರು ಸಾಯಿಸಿದ್ದಾರೆ. ಇದಕ್ಕೂ ಮುನ್ನ ಮುಸ್ಲಿಂ ಎಂದು ಹೇಳಿದರೆ ಬಿಡುತ್ತೇವೆ. ಬಳಿಕ ಮೋದಿಯನ್ನು ಕರೆದು ಹೇಳಿ ಅಂತ ಅಂದಿದ್ದಾರೆ. ನನ್ನ ಮಗಳ ಎದುರೇ ತಲೆಗೆ ಶೂಟ್ ಮಾಡಿದ್ರಂತೆ” ಎಂದು ಕಣ್ಣೀರು ಹಾಕಿದರು.
“ಇದೇ ತಿಂಗಳು 18ಕ್ಕೆ ಹೋಗಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ವಾಪಸ್ ಆಗಬೇಕಿತ್ತು. ಮಕ್ಕಳು ಹಾಗೂ ಮಹಿಳೆಯರನ್ನು ಸಾಯಿಸಲ್ಲ ಅಂದ್ರಂತೆ. ನಾವು ಸಹ ಕಳೆದ ಬಾರಿ ಕಾಶ್ಮೀರಕ್ಕೆ ಹೋಗಿದ್ದೆವು. ಈ ಬಾರಿ ಮಗಳ ಕುಟುಂಬ ಹೋಗಿತ್ತು” ಎಂದು ಬೇಸರ ವ್ಯಕ್ತಪಡಿಸಿದರು.











































