ವೈದ್ಯಕೀಯ ಸಮುದಾಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆರೋಪಿಯ ಬಂಧನವಾಗದಿರುವುದನ್ನು ತೀವ್ರವಾಗಿ ಖಂಡಿಸಿ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪುತ್ತೂರು ಶಾಖೆಯು ಇಂದು ನಗರದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಇದರ ಅಂಗವಾಗಿ, ಪುತ್ತೂರಿನ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳಲ್ಲಿ ತುರ್ತು ಚಿಕಿತ್ಸೆ ಹಾಗೂ ಒಳರೋಗಿ ಸೇವೆಗಳನ್ನು ಹೊರತುಪಡಿಸಿ, ಉಳಿದ ಹೊರರೋಗಿ (ಒಪಿಡಿ) ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಪುತ್ತೂರು, ಏ 26 : ವೈದ್ಯಕೀಯ ಸಮುದಾಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆರೋಪಿಯ ಬಂಧನವಾಗದಿರುವುದನ್ನು ತೀವ್ರವಾಗಿ ಖಂಡಿಸಿ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪುತ್ತೂರು ಶಾಖೆಯು ಇಂದು ನಗರದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಇದರ ಅಂಗವಾಗಿ, ಪುತ್ತೂರಿನ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳಲ್ಲಿ ತುರ್ತು ಚಿಕಿತ್ಸೆ ಹಾಗೂ ಒಳರೋಗಿ ಸೇವೆಗಳನ್ನು ಹೊರತುಪಡಿಸಿ, ಉಳಿದ ಹೊರರೋಗಿ (ಒಪಿಡಿ) ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಐಎಂಎ ಪುತ್ತೂರು ಶಾಖೆಯ ಗೌರವ ಕಾರ್ಯದರ್ಶಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಅವರು ಮಾಹಿತಿ ನೀಡಿದ್ದು, “ಪುತ್ತೂರು ಆಸ್ಪತ್ರೆಗಳ ಸಂಘ ಹಾಗೂ ಪುತ್ತೂರು ವೈದ್ಯರ ವೇದಿಕೆಯ ಪದಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ, ತೀವ್ರ ನೋವು ಮತ್ತು ಅಸಮಾಧಾನದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಆರೋಪಿಯ ಬಂಧನ ವಿಳಂಬವಾಗುತ್ತಿರುವುದನ್ನು ಪ್ರತಿಭಟಿಸಿ ಇಂದು ಪುತ್ತೂರಿನಲ್ಲಿ ನಮ್ಮ ಅಗತ್ಯವಲ್ಲದ (ಹೊರರೋಗಿ) ಸೇವೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಪ್ರತಿಭಟನೆಯ ಭಾಗವಾಗಿ, ಎಲ್ಲಾ ಸದಸ್ಯರು ಬೆಳಿಗ್ಗೆ 10 ಗಂಟೆಗೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿ ಜಮಾಯಿಸಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಡಾ. ಮುದ್ರಾಜೆ ಮನವಿ ಮಾಡಿದ್ದಾರೆ. “ಈ ಬಾರಿ ನಾವು ಕೇವಲ ವೈದ್ಯರಲ್ಲ. ಸ್ವಾಭಿಮಾನವುಳ್ಳ ಮನುಷ್ಯರು (humans with spine) ಎಂಬುದನ್ನು ತೋರಿಸಬೇಕಿದೆ! ದಯವಿಟ್ಟು ನಮ್ಮ ಗೌರವವನ್ನು ಉಳಿಸಲು ಬೆಂಬಲಿಸಿ” ಎಂದು ಅವರು ವೈದ್ಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಈ ಪ್ರತಿಭಟನೆಯಿಂದಾಗಿ ಇಂದು ಪುತ್ತೂರಿನ ಖಾಸಗಿ ಕ್ಲಿನಿಕ್ಗಳು ಹಾಗೂ ಆಸ್ಪತ್ರೆಗಳ ಹೊರರೋಗಿ ವಿಭಾಗಗಳು ಕಾರ್ಯನಿರ್ವಹಿಸುವುದಿಲ್ಲ. ಆದಾಗ್ಯೂ, ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಹಾಗೂ ಆಸ್ಪತ್ರೆಗಳಲ್ಲಿ ಈಗಾಗಲೇ ದಾಖಲಾಗಿರುವ ಒಳರೋಗಿಗಳ ಆರೈಕೆಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಐಎಂಎ ಸ್ಪಷ್ಟಪಡಿಸಿದೆ.ಆರೋಪಿಯನ್ನು ಶೀಘ್ರವಾಗಿ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ವೈದ್ಯರ ಪ್ರಮುಖ ಆಗ್ರಹವಾಗಿದೆ.













































