ಜನಿವಾರ ತೆಗೆಸಿದ್ದು ಅಸಾಂವಿಧಾನಿಕ ಎಂದು ಘೋಷಿಸಿ, ಅವಕಾಶ ವಂಚಿತರಿಗೆ ಮರು ಸಿಇಟಿ ಪರೀಕ್ಷೆಗೆ
ಬೆಂಗಳೂರು: ಸಿಇಟಿ ವೇಳೆ ವಿದ್ಯಾರ್ಥಿಗಳ ಜನಿವಾರ4G+74ತೆಗೆಸಿದ ಪ್ರಕರಣಗಳನ್ನು ಪ್ರಶ್ನಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ ನೋಟಿಸ್ ನೀಡಿ ವಿಚಾರಣೆಯನ್ನು ಜೂ. 9ಕ್ಕೆ ಮುಂದೂಡಿದೆ.ಜನಿವಾರ ಧರಿಸಿದ್ದ ವಿದ್ಯಾರ್ಥಿಗಳಿಗೆ ಸಿಇಟಿಗೆ ಹಾಜರಾಗಲು ಅವಕಾಶ ನೀಡದಿರುವ ಸಂವಿಧಾನಬಾಹಿರ ಕೃತ್ಯದಿಂದ ಮಕ್ಕಳ ಶಿಕ್ಷಣ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಮಕ್ಕಳಿಗೆ ಮರು ಪರೀಕ್ಷೆ ನಡೆಸಬೇಕು ಎಂದು ಕೋರಿ ಬ್ರಾಹ್ಮಣ ಮಹಾಸಭಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ.ಅಂಜಾರಿಯಾ ಮತ್ತು ನ್ಯಾ| ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ.
ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂಬುದಕ್ಕೆ ಸಂಬಂಧಿಸಿ ಅರ್ಜಿಯಲ್ಲಿ ಮಾಡಲಾಗಿರುವ ಆರೋಪಗಳನ್ನು ದೃಢೀಕರಿಸಬೇಕಾಗಿದೆ. ಆರೋಪ ಗಂಭೀರವಾಗಿದ್ದು, ಇದನ್ನು ಜಾಗರೂಕತೆಯಿಂದ ವಿಚಾರಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹೆಸರು ಅಗತ್ಯವಿದೆ ಎಂದು ತಿಳಿಸಿತು. ಅರ್ಜಿದಾರರ ವಕೀಲರು ವಿದ್ಯಾರ್ಥಿಗಳ ಹೆಸರುಗಳನ್ನು ಒದಗಿಸಲು ನಿರ್ಧರಿಸಿದರು.
ಅರ್ಜಿದಾರರ ಪರ ವಾದ
ಅರ್ಜಿದಾರರ ಪರ ವಾದಿಸಿದ ಎಸ್. ಶ್ರೀರಂಗ ಅವರು, ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎ. 16 ಮತ್ತು 17ರಂದು ಪರೀಕ್ಷೆ ನಡೆಸಲಾಗಿತ್ತು. ಆ ಸಂದರ್ಭಜನಿವಾರ ಧರಿಸಿದ್ದವರಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನಿರಾಕರಿಸಲಾಗಿದೆ. ಜನಿವಾರ ಧರಿಸಿದ್ದವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ರಾಜ್ಯದ ಹಲವೆಡೆ ಇಂತಹ ಘಟನೆಗಳು ನಡೆದಿದ್ದು, ಕೆಲವು ಭಾಗಗಳಲ್ಲಿ ಜನಿವಾರಗಳನ್ನು ಕತ್ತರಿಸಿ ಹಾಕಲಾಗಿದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ಕಾರಣಕ್ಕಾಗಿ ಪರೀಕ್ಷೆ ಬರೆಯಲಾಗದವರಿಗೆ ಮತ್ತೂಮ್ಮೆ ಸಿಇಟಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
“ಧಾರ್ಮಿಕ ವಿಧಿ ವಿಧಾನಗಳ ಮೂಲಕ ಶ್ರದ್ದೆ ಮತ್ತು ಭಕ್ತಿಯಿಂದ ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಧರಿಸುವ ಜನಿವಾರವನ್ನು ಬಲವಂತವಾಗಿ ತೆಗೆಸಿರುವುದರಿಂದ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ. ಇಂತಹ ಸಂವಿಧಾನ ವಿರೋಧಿ ಕ್ರಮಕ್ಕೆ ಕೈ ಹಾಕಿದ ಅಧಿಕಾರಿಗಳ ವಿರುದ್ದ ಸರಕಾರ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿನಲ್ಲಿ ಹೇಳಲಾಗಿದೆ.
ಉದ್ದೇಶಪೂರ್ವಕ ಅಲ್ಲ
“ಜನಿವಾರ ತೆಗೆಸಲು ಮುಂದಾದ ಕಾರಣದಿಂದ ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆಯೂ ಸರಕಾರಿ ಸೀಟು ನೀಡಲು ನಿರ್ಧರಿಸಲಾಗಿದೆ. ಈ ಘಟನೆ ಉದ್ದೇಶಪೂರ್ವಕವಾಗಿ ಮಾಡಿಲ್ಲ. ಇದು ಸರಕಾರಕ್ಕೂ ನೋವುಂಟು ಮಾಡಿದೆ. ತಪ್ಪಿತಸ್ಥ ಸಿಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಅಂಶವನ್ನು ಪೀಠಕ್ಕೆ ವಿವರಿಸಲಾಗುವುದು ಎಂದು ಸರಕಾರದ ಪರ ವಕೀಲರು ತಿಳಿಸಿದರು.













































