ಮ೦ಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದಂತೆ ಕರ್ನಾಟಕದಾದ್ಯಂತ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಸ್ಥಾವರಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯ.
ಆದರೆ ನೀರಾವರಿ ಪಂಪ್‌ಸೆಟ್ ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಅದರಂತೆ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ- ಮೆಸ್ಕಾಂ ವ್ಯಾಪ್ತಿಯಲ್ಲಿಯೂ 2026 ಜನವರಿ ಒಂದರಿಂದ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಸ್ಥಾವರಗಳಿಗೆ, ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವುದಕ್ಕೆ ಆದೇಶ ನೀಡಲಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ಹೆಚ್ಚಿನ ಸ್ಥಳಾವಕಾಶಬೇಕಾಗಿದೆ ಮತ್ತು ಹೆಚ್ಚು ವೆಚ್ಚ ತಗಲುವುದೆಂಬ ಆತಂಕ ಗ್ರಾಹಕರಲ್ಲಿ ಮತ್ತು ಗುತ್ತಿಗೆದಾರರಲ್ಲಿ ಇದೆ ಎಂಬುದಾಗಿ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಮೆಸ್ಕಾಂ ಈ ಸ್ಪಷ್ಟಿಕರಣ ನೀಡಿದೆ.
ಸ್ಮಾರ್ಟ್ ಮೀಟರ್‌ಗಳನ್ನು ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಸ್ಥಾವರಗಳಿಗೆ ಮಾತ್ರ ಅಳವಡಿಸುತ್ತಿರುವುದರಿಂದ, ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ಪ್ರತ್ಯೇಕವಾಗಿ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ಅಗತ್ಯ ಇರುವುದಿಲ್ಲ, 2026 ಜನವರಿಯಿಂದ ಸ್ಮಾರ್ಟ್ ಮೀಟರನ್ನು ಅಳವಡಿಸಲು ಪ್ರಾರಂಭಿಸುವುರಿಂದ, ಈ ಪ್ರಕ್ರಿಯೆಗೆ ಸಾಕಷ್ಟು ಸಮಯಾವಕಾಶ ನೀಡಿದಂತಾಗಿದೆ.ಹಾಲಿ ಇರುವ ವಿದ್ಯುತ್ ಗ್ರಾಹಕರಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವುದು ಕಡ್ಡಾಯವಲ್ಲ ಎಂದು ಮೆಸ್ಕಾಂ ಸ್ಪಷ್ಟನೆ ನೀಡಿದೆ.













































