
ಕಡಬ: ವಿಮಾ ಕಂತನ್ನು ಪ್ರಾಮಾಣಿಕವಾಗಿ ಕಟ್ಟಿದ ರೈತವರ್ಗಕ್ಕೆ ಬೆಳೆ ವಿಮೆಯ ಹಣ ಬರುವವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಕಿಶೋರ್ ಶಿರಾಡಿ ತಿಳಿಸಿದ್ದಾರೆ.
ನ.30ರಂದು ಕಡಬ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಆರಂಭವಾಗಲಿದ್ದು, ಜಿಲ್ಲಾಧಿಕಾರಿ ಸಹಿತ ಪ್ರಾಕೃತಿಕ ವಿಕೋಪ ತಂಡದ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತರ ಖಾತೆಗೆ ಹಣ ಪಾವತಿ ಮಾಡುವವರೆಗೆ ಈ ಪ್ರತಿಭಟನೆ ನಿರಂತರವಾಗಿ ನಡೆಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿಶೋರ್, ಸದಾಕಾಲ ಸಮಸ್ಯೆಯಲ್ಲೇ ಬದುಕುವ ರೈತವರ್ಗಕ್ಕೆ ಬೆಳೆ ವಿಮೆಯ ಹಣವನ್ನು ವಂಚಿಸಲಾಗುತ್ತಿದೆ. ಬೆಳೆ ವಿಮೆಯಲ್ಲಿ ರೈತರಿಗೆ ಸಿಗಬೇಕಾದ ಕೋಟ್ಯಂತರ ಹಣವನ್ನು ಅಧಿಕಾರಿಗಳೇ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ, ರಾಜ್ಯ ಮತ್ತು ರೈತರಿಂದ ಬೆಳೆವಿಮೆ ಕಂಪೆನಿಗೆ ಶೇ.35ರಷ್ಟು ಹಣ ಪಾವತಿ ಮಾಡಲಾಗುತ್ತಿದೆ. ಆದರೆ ಪ್ರಾಕೃತಿಕ ವಿಕೋಪ ತಂಡ ಮಳೆಮಾಪಕ ಯಂತ್ರದ ಮಾಹಿತಿಯನ್ನು ಆಧರಿಸಿ ವರದಿ ನೀಡುತ್ತಿದೆ. ಕಡಬ ತಾಲೂಕಿನಲ್ಲಿ 16 ಮಳೆಮಾಪಕ ಯಂತ್ರಗಳು ಹಲವು ವರ್ಷಗಳಿಂದ ಹಾಳಾಗಿವೆ. ಹಾಗಾಗಿ ಈ ಭಾಗದ ರೈತರಿಗೆ ಬೆಳೆ ವಿಮೆಯಲ್ಲಿ ವಂಚನೆಯಾಗುತ್ತಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯ ಸಂದರ್ಭ ರೈತರು ಆಕ್ರೋಶಗೊಂಡು ರಸ್ತೆ ತಡೆಗೆ ಮುಂದಾದರೆ ಅದಕ್ಕೆ ಜಿಲ್ಲಾಧಿಕಾರಿಯೇ ನೇರ ಹೊಣೆ ಎಂದು ಕಿಶೋರ್ ಎಚ್ಚರಿಸಿದರು. ರೈತರ ಈ ಪ್ರತಿಭಟನೆಗೆ ಸಹಕಾರಿ ಸಂಘಗಳು ಬೆಂಬಲ ನೀಡಬೇಕೆಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಮುಖಂಡರಾದ ದಿವೇಶ್ ಗೌಡ ಕಲ್ಲು, ಮೋಹನ್ ಕೆರೆಕೋಡಿ, ಕುಶಾಲಪ್ಪ ಗೌಡ ಅನಿಲ ಉಪಸ್ಥಿತರಿದ್ದರು.













































