ಹೈದರಾಬಾದ್: ತೆಲಂಗಾಣ(Telangana) ಕಾಂಗ್ರೆಸ್ ಸರ್ಕಾರವು ತಮ್ಮ ವೃದ್ಧ ಹೆತ್ತ ಪೋಷಕರನ್ನು ನೋಡಿಕೊಳ್ಳದ ಸರ್ಕಾರಿ ನೌಕರರ ವಿರುದ್ಧ ಅವರ ಸ್ಯಾಲರಿಯಿಂದ ಶೇ. 15ರಷ್ಟು ಕಡಿತ ಮಾಡುವ ಕಾನೂನು ತರಲು ಮುಂದಾಗಿದೆ. ಮುಂದಿನ ಅಧಿವೇಶನದಲ್ಲಿ ಅದನ್ನು ಮಂಡಿಸುವ ಸಾಧ್ಯತೆ ಇದೆ. ಈ ಕುರಿತು ಸೋಮವಾರ(ಜ. 12) ಮಾತನಾಡಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೆಲವು ಸರ್ಕಾರಿ ನೌಕರರು ಅವರ ವೃದ್ಧ ಪೋಷಕರನ್ನು ನಿರ್ಲಕ್ಷಿಸುತ್ತಿರುವ ಮಾಹಿತಿಗಳು ಬಂದಿವೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ತಮ್ಮ ಸರ್ಕಾರವು ಪೋಷಕರನ್ನು ನಿರ್ಲಕ್ಷಿಸುವ ಸರ್ಕಾರಿ ನೌಕರರ ವೇತನದಿಂದ ಶೇ. 10-15 ರಷ್ಟು ಕಡಿತಗೊಳಿಸಿ, ಆ ಮೊತ್ತವನ್ನು ಪೋಷಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಕಾನೂನು ಜಾರಿಗೆ ತರುವುದಾಗಿ ಹೇಳಿದ್ದಾರೆ.
ವೃದ್ಧ ಪೋಷಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು. ತಮ್ಮ ಹೆತ್ತವರನ್ನೇ ನೋಡಿಕೊಳ್ಳದವರು ಸಮಾಜದ ಜವಾಬ್ದಾರಿಯನ್ನು ಹೇಗೆ ಪೂರೈಸುತ್ತಿಲ್ಲ ಎಂದು ಹೇಳಬಹುದು. ಹಿರಿಯ ನಾಗರಿಕರಿಗಾಗಿ ತಮ್ಮ ಸರ್ಕಾರ ‘ಪ್ರಾಣಾಮ್’ ಎಂಬ ಡೇ ಕೇರ್ ಸೆಂಟರ್‌ಗಳನ್ನು ಸ್ಥಾಪಿಸುತ್ತಿದೆ. ನಮ್ಮ ಹಿರಿಯರು ಘನತೆಯಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳಲು ಇದು ಮಾನವೀಯ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ಮುಂದುವರೆದು ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರತಿ ಪುರಸಭೆಯಲ್ಲಿ ಒಂದು ಸಹಕಾರಿ ಸದಸ್ಯ ಹುದ್ದೆ ಮೀಸಲಿಡುವ ಮೂಲಕ ನಮ್ಮ ಸರ್ಕಾರ ಅಲ್ಲಿ, ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತದೆ ಎಂದಿದ್ದಾರೆ











































