ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಅಮರಮೂಡ್ನೂರಿನಲ್ಲಿ ನೂತನ MRF ಸ್ಥಾಪಿಸುವಂತೆ ಮನವಿ ಮಾಡಲಾಯಿತು. ಜಲ್ ಜೀವನ್ ಯೋಜನೆ ಪ್ರಾರಂಭವಾಗಿ ಸುಮಾರು 05 ವರ್ಷಗಳು ಕಳೆದಿದ್ದರೂ, ಹಲವೆಡೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ, ಉಭಯ ಜಿಲ್ಲೆಗಳ ಸಾವಿರಾರು ಗ್ರಾಮೀಣ ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯ ಸಂಪೂರ್ಣ ಪ್ರಯೋಜನ ಸಿಗಲು ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವುದನ್ನು ಗಮನಿಸಿ ಈ ಕುರಿತು ತಕ್ಷಣ ಪರಿಶೀಲನೆ ನಡೆಸಿ, ಇನ್ನೂ ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ (ಪಂಚಾಯತ್ ರಾಜ್ ) ಪ್ರಸ್ತುತ ಹೆಚ್ಚುವರಿ ಪ್ರಭಾರದೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾಗಿರುವ ಶ್ರೀ ರಂದೀಪ್ ಐಎಎಸ್ ಅವರಿಗೆ ಮನವಿ ಸಲ್ಲಿಸಲಾಯಿತು. ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ 68 ಗ್ರಾಮ ಪಂಚಾಯತಿಗಳಿಂದ ಸಂಗ್ರಹವಾಗುವ ಒಣಕಸವನ್ನು ಪ್ರಸ್ತುತ ಪುತ್ತೂರು ತಾಲೂಕಿನ ಕೆದಂಬಾಡಿಯಲ್ಲಿ ಇರುವ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ (MRF) ಸಂಸ್ಕರಿಸಲಾಗುತ್ತಿದೆ.
ಆದರೆ, ಈ ಘಟಕದ ಸಾಮರ್ಥ್ಯ ಕೇವಲ 07 ಟನ್ ಆಗಿದ್ದು, ಪ್ರಸ್ತುತ ಸಂಗ್ರಹವಾಗುತ್ತಿರುವ ಒಣಕಸದ ಪ್ರಮಾಣ ಸಾಮರ್ಥ್ಯ ಮೀರಿರುವುದರ ಜೊತೆಗೆ, ಭೌಗೋಳಿಕ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಕಸದ ನಿರ್ವಹಣೆಯಲ್ಲಿ ತೀವ್ರ ಅಡಚಣೆಗಳು ಎದುರಾಗುತ್ತಿವೆ ಎಂಬುದನ್ನು ಶಾಸಕರ ಗಮನಕ್ಕೆ ಕಿಶೋರ್ ಕುಮಾರ್ ಪುತ್ತೂರು ತಂದರು. ಮನವಿಗೆ ಸ್ಪಂದಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರು, ಉಲ್ಲೇಖಿತ ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.













































