ದ್ರೌಪದಿ ಮುರ್ಮು ನೆರಳಾಗಿದ್ದು, ನೆಟ್ಟಿಗರ ಮನ ಗೆದ್ದಿದ್ದ ಮೇಜ‌ರ್ ರಿಷಬ್ ನಿವೃತ್ತಿ

Picture of Savistara

Savistara

Bureau Report

ರಾಷ್ಟ್ರಪತಿ ದೌಪದಿ ಮುರ್ಮು ಅವರು ಕಾರ್ಯಕ್ರಮಕ್ಕೆ ಹೊರಟರೆಂದರೆ ಬಿಗಿ ಭದ್ರತೆ ಇರಲೇಬೇಕು. ಹೀಗೆ ಮುರ್ಮು ಅವರಿಗೆ ಬೆಂಗಾವಲಾಗಿ ನಿಂತಿರುತ್ತಿದ್ದ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ ಅವರು ಸೇನೆಯಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. 12 ವರ್ಷ ಭಾರತೀಯ ಸೇನೆಯಲ್ಲಿದ್ದ ರಿಷಬ್ ಅವಧಿಗೂ ಮುನ್ನ ನಿವೃತ್ತಿ ಪಡೆದಿದ್ದಾರೆ.

ಮೇಜರ್ ರಿಷಬ್ ಅವರು ಭಾರತೀಯ ಸೇನೆಯ 4 ಪ್ಯಾರಾ (ಸ್ಪೆಷಲ್ ಫೋರ್ಸಸ್) ಕಮಾಂಡೋ ಪಡೆಯ ಅಧಿಕಾರಿಯಾಗಿದ್ದರು. ಇತ್ತೀಚಿನವರೆಗೂ ಅವರು ಮುರ್ಮು ಅವರ ಅಧಿಕೃತ Aide-de-Camp (ADC – ಸೇನಾ ಸಹಾಯಕ) ಆಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರಪತಿ ಭವನದ ಕಾರ್ಯಕ್ರಮಗಳಲ್ಲಿ ತಮ್ಮ ಶಿಸ್ತು ಮತ್ತು ಬದ್ಧತೆಯಿಂದಾಗಿ ಗಮನ ಸೆಳೆದಿದ್ದರು.ಜಮ್ಮುವಿನ ಡೋಗ್ರಾ ರಜಪೂತ ಜನಾಂಗದ ರಿಷಭ್ ಸಿಂಗ್ ಸಂಬ್ಯಾಲ್ ಅವರು 2021 ರಲ್ಲಿ ಜಾಟ್ ರೆಜಿಮೆಂಟ್‌ನ ಕ್ಯಾಪ್ಟನ್ ಆಗಿ, ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಒಂದು ತುಕಡಿಯ ನೇತೃತ್ವ ವಹಿಸಿದ್ದರು.

ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ರಿಷಬ್

ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಸಂಚಲನ ಸೃಷ್ಟಿಸಿದ್ದರು. ತಮ್ಮ ಶಿಸ್ತು, ಗಂಭೀರ ಮುಖಭಾವ, ಸಂದರ್ಭವನ್ನು ನಿಭಾಯಿಸುವ ರೀತಿ, ತಾಳ್ಮೆ, ಮುರ್ಮು ಅವರಿಗೆ ನೆರವಾಗುವ ಪರಿ, ಸಭ್ಯತೆಯಿಂದ ನೆಟ್ಟಿಗರ ಗಮನ ಸೆಳೆದಿದ್ದರು.ಕೆಲವು ಸಂದರ್ಭಗಳಲ್ಲಿ ಮುರ್ಮು ಅವರು ಜನರನ್ನು ಮಾತನಾಡಿಸಲು ಹೋದಾಗ ರಿಷಬ್ ಅವರನ್ನೂ ಮಾತನಾಡಿಸಿದ ಸಾಕಷ್ಟು ವಿಡಿಯೊಗಳು ಹರಿದಾಡಿದ್ದವು. ಅನೇಕರು ಅವರ ಫೋಟೊ, ವಿಡಿಯೊಗಳನ್ನು ಹಂಚಿಕೊಂಡು, ‘ರಿಷಬ್ ಅವರು ಮುರ್ಮು ಅವರನ್ನು ತಾಯಿಯಂತೆ ನೋಡಿಕೊಳ್ಳುತ್ತಾರೆ’ ಎಂದು ಮೆಚ್ಚುಗೆ ಸೂಚಿಸಿದ್ದರು.ಮುರ್ಮು ಅವರು ಶಬರಿಮಲೆಗೆ ಭೇಟಿ ನೀಡಿದ್ದ ವೇಳೆ ಇರುಮುಡಿ ಹೊತ್ತು ಮೆಟ್ಟಿಲು ಹತ್ತಲಾಗದೆ ಇದ್ದಾಗ ಕಾಳಜಿಯಿಂದ ಅವರನ್ನು ಹತ್ತಿಸಿದ್ದ ರೀತಿ, ಕಾರ್ಯಕ್ರಮಗಳಲ್ಲಿ ಕೊಂಚವೂ ತೊಂದರೆಯಾಗದಂತೆ ಅವರನ್ನು ನೋಡಿಕೊಳ್ಳುತ್ತಿದ್ದ ವಿಡಿಯೊಗಳು ಸಿಕ್ಕಾಪಟ್ಟೆ ಹರಿದಾಡಿವೆ. ರಿಷಬ್ ಅವರನ್ನು ಅನೇಕರು ‘ನ್ಯಾಷನಲ್ ಕ್ರಶ್’ ಎಂದೇ ಕರೆಯುತ್ತಿದ್ದರು.

ಲೈವ್‌ನಲ್ಲಿ ನಿವೃತ್ತಿ ಬಗ್ಗೆ ಮಾತುಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ ತಾವು ಸೇನೆಯಿಂದ ನಿವೃತ್ತಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಲೈವ್ ವೇಳೆ ನೆಟ್ಟಿಗರು ಕೇಳಿದ ಕೆಲವು ಪ್ರಶ್ನೆಗಳಿಗೂ ಅವರು ಉತ್ತರಿಸಿದ್ದರು. ಈ ವೇಳೆ, ‘ಭಾರತ ಸೇನೆ ಬಿಟ್ಟು ವಿದೇಶಕ್ಕೆ ಹೋಗಿ ನೆಲೆಸುತ್ತಾರೆ ಎನ್ನುವ ಸುದ್ದಿ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಆದರೆ, ಭಾರತವನ್ನು ಬಿಟ್ಟು ಹೋಗುವುದಿಲ್ಲ, ಇಲ್ಲೇ ಇದ್ದು, ದೇಶಕ್ಕಾಗಿ ಸೇವೆ ಸಲ್ಲಿಸುತ್ತೇನೆ. ಮುಂದಿನ ಯೋಜನೆ ಏನು ಎನ್ನುವ ಬಗ್ಗೆ ಶೀಘ್ರದಲ್ಲಿ ತಿಳಿಸುತ್ತೇನೆ’ ಎಂದಿದ್ದಾರೆ.ಸೇನೆ ತೊರೆಯಲು ಕಾರಣವೇನು?’ಪ್ರತಿಯೊಬ್ಬರ ಜೀವನದಲ್ಲೂ ಕೆಲವೊಂದು ಸನ್ನಿವೇಶ ಎದುರಾಗುತ್ತದೆ, ಕೆಲವು ಘಟನೆಗಳು ನಡೆಯುತ್ತವೆ. ಅವು ಜೀವನವನ್ನೇ ಶಾಶ್ವತವಾಗಿ ಬದಲಾಯಿಸುತ್ತವೆ. ಕೆಲವು ಖಾಸಗಿ ಕಾರಣಗಳಿಂದ ಮತ್ತು ಕುಟುಂಬಕ್ಕಾಗಿ ಸೇನೆಯನ್ನು ತೊರೆದಿರುವೆ. ಆದರೆ ಈವರೆಗೆ ನಾನು ಏನು ಸಾಧಿಸಿದ್ದೇನೆ ಅದರ ಬಗ್ಗೆ ಹೆಮ್ಮೆಯಿದೆ. ನನಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ.ನಿಮಗೆ ಮದುವೆಯಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ನನಗೆ ಮದುವೆಯಾಗಿಲ್ಲ, ಗೆಳತಿಯೂ ಇಲ್ಲ. ಮದುವೆಯಾದರೂ ನಿಮಗೆಲ್ಲರಿಗೂ ತಿಳಿಸುತ್ತೇನೆ’ ಎಂದಿದ್ದಾರೆ.

ಯುಟ್ಯೂಬ್ ಆರಂಭ

ಲೈವ್ ಮಾತುಕತೆಯ ವಿಡಿಯೊ ಹಂಚಿಕೊಳ್ಳುವ ಮೂಲಕ ರಿಷಬ್ ಅವರು ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಆಗಾಗ ವಿಡಿಯೊ ಹಂಚಿಕೊಳ್ಳುವ ಮೂಲಕ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ‘ರಾಷ್ಟ್ರಪತಿಗಳ ಮಾಜಿ ಎಡಿಸಿ’ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

[t4b-ticker]
error: Content is protected !!