ಸ್ಪೀಕರ್ ವಿರುದ್ಧ ಕೋರ್ಟ್‌ಗೆ ಮೊರೆ: ನಾಳೆ ಬಿಜೆಪಿ ನಿರ್ಧಾರ?

Picture of Savistara

Savistara

Bureau Report

18 ಶಾಸಕರ ಅಮಾನತು ಪ್ರಕರಣ, ಮನವಿ ಕೊಟ್ಟರೂ ಆದೇಶ ಹಿಂಪಡೆಯದ ಸ್ಪೀಕರ್, ನಾಳೆ ಬಿಜೆಪಿ-ಸ್ಪೀಕರ್ ಸಭೆ

ಬೆಂಗಳೂರು: ವಿಧಾನಸಭೆಯಿಂದ ಬಿಜೆಪಿಯ 18 ಶಾಸಕರಅಮಾನತು ವಿಚಾರ ಈಗ ಮತ್ತೊಂದು ಮಜಲು ತಲುಪುವ ಸಾಧ್ಯತೆ ಇದೆ. ಸ್ಪೀಕರ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದ್ದು, ಸೋಮವಾರ ಈ ಕುರಿತು ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ.ಶಾಸಕರ ಅಮಾನತು ಆದೇಶ ವಾಪಸ್ ವಿಷಯದಲ್ಲಿ ಸ್ಪೀಕರ್ ಯು.ಟಿ. ಖಾದ‌ರ್ ಮತ್ತು ಬಿಜೆಪಿ ನಾಯಕರ ನಡುವೆ ಸೋಮವಾರ ಮಹತ್ವದ ಸಭೆ ನಡೆಯುವ ಸಾಧ್ಯತೆಗಳಿದ್ದು, ಒಂದು ವೇಳೆ ಅಲ್ಲಿ ಸಂಧಾನ ಏರ್ಪಟ್ಟರೆ ವಿಷಯ ಇಲ್ಲಿಗೇ ಮುಕ್ತಾಯವಾಗಬಹುದು ಎಂದು ತಿಳಿದುಬಂದಿದೆ. ಒಂದು ವೇಳೆ ಕಗ್ಗಂಟು ಮುಂದುವರಿದರೆ ಸ್ಪೀಕ‌ರ್ ವಿರುದ್ಧ ಬಿಜೆಪಿ ನ್ಯಾಯಾ ಲಯದ ಮೆಟ್ಟಿಲೇರುವ ಸಾಧ್ಯತೆ ಗಳು ದಟ್ಟವಾಗಿವೆ.

ಶಾಸಕಾಂಗದ ವಿಷಯವು ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಸನ್ನಿವೇಶ ಸೃಷ್ಟಿ ಆಗಬಾರದೆಂಬುದು ನಮ್ಮೆಲ್ಲರ ಅಭಿಪ್ರಾಯ. ಕೆಲವು ದಿನಗಳ ಹಿಂದೆ ಅಮಾನತಾದ ಎಲ್ಲ ಶಾಸಕರು ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದೇವೆ. ಈ ವಿಚಾರವನ್ನು ಸ್ಪೀಕರ್‌ ಅವರ ಗಮನಕ್ಕೂ ತರಲಾಗಿದೆ. ಸೋಮವಾರ ಭೇಟಿ ಹಾಗೂ ಚರ್ಚೆಗೆ ಸಮಯ ನೀಡುತ್ತೇನೆ ಎಂಬ ಭರವಸೆ ಅವರಿಂದ ಲಭಿಸಿದೆ. ಇಷ್ಟಾದ ಮೇಲೂ ಸಮಸ್ಯೆ ಬಗೆ ಹರಿಯದೆ ಇದ್ದರೆ ನ್ಯಾಯಾಲಯದ ಮೆಟ್ಟಿಲು ಹತ್ತುವುದು ನಮಗೆ ಅನಿವಾರ್ಯವಾಗಬಹುದು ಎಂದು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಕಳೆದ ಬಜೆಟ್ ಅಧಿ ವೇಶನದ ಕೊನೆಯ ದಿನ ಸ್ಪೀಕ‌ರ್ ಮೇಲೆ ಕಾಗದಪತ್ರಗಳನ್ನು ಎಸೆದು, ಗದ್ದಲ ಎಬ್ಬಿಸಿದ್ದಕ್ಕಾಗಿ ಬಿಜೆಪಿಯ 18 ಮಂದಿ ಶಾಸಕರನ್ನು ಮುಂದಿನ 6 ತಿಂಗಳುಗಳ ಕಾಲ ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದ‌ರ್ ಅವರು ಆದೇಶ ಹೊರಡಿಸಿದ್ದರು.ವಿಧಾನಸಭೆಯ ನಿಯಮಗಳ ಪ್ರಕಾರ ಒಮ್ಮೆ ಸದನದಿಂದ ಅಮಾನತು ಆದೇಶ ಪ್ರಕಟವಾದರೆ ಅದನ್ನು ಶಾಸನಸಭೆಯಲ್ಲಿ ಮಂಡಿಸಿಯೇ ವಾಪಸ್ ಪಡೆಯಬೇಕಾಗುತ್ತದೆ. ಹೀಗಾಗಿ ಮುಂದಿನ ಮುಂಗಾರು ಅಧಿವೇಶನದವರೆಗೆ ಆದೇಶ ವಾಪಸ್ ಪಡೆಯುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ ಶಾಸಕರು ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ.

ವಿಪಕ್ಷ ಸದಸ್ಯರಿಲ್ಲದೆ 10ಕ್ಕೂ ಹೆಚ್ಚು ಸಮಿತಿ ಸಭೆ!ಬೆಂಗಳೂರು:

ತನ್ನ 18 ಶಾಸಕರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಬಿಜೆಪಿ ವಿಧಾನಮಂಡಲದ ಉಭಯ ಸದನಗಳ ಸಮಿತಿಯ ಸಭೆಗಳನ್ನು ಬಹಿಷ್ಕರಿಸುತ್ತಿರುವುದು ಭವಿಷ್ಯದಲ್ಲಿ ಶಾಸನಾತ್ಮಕ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗುವ ಅಪಾಯವಿದೆ.ಕಳೆದ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಮುಸ್ಲಿಂ ಮೀಸಲು ಹಾಗೂ ಹನಿಟ್ರ್ಯಾಪ್ ವಿಷಯಕ್ಕೆ ಸಂಬಂಧಿಸಿ ಏರ್ಪಟ್ಟ ಗದ್ದಲದ ಹಿನ್ನೆಲೆಯಲ್ಲಿ ಬಿಜೆಪಿಯ 18 ಶಾಸಕರನ್ನು ಆರು ತಿಂಗಳು ಕಾಲ ಅಮಾನತು ಮಾಡಲಾಗಿತ್ತು. ಜತೆಗೆ ಅವರು ಯಾವುದೇ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಟಿಎ, ಡಿಎ ಪಡೆಯುವುದಕ್ಕೆ ಅರ್ಹರಲ್ಲ ಎಂಬುದರ ಸಹಿತ ಹಲವು ಕಟ್ಟಳೆಗಳನ್ನು ಸ್ಪೀಕರ್ ಯು.ಟಿ. ಖಾದರ್ ಅವರು ವಿಧಿಸಿದ್ದರು. ಇದನ್ನು ಖಂಡಿಸಿ ಬಿಜೆಪಿಯು ಉಭಯ ಸದನಗಳ ಸಮಿತಿಯ ಸಭೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿತ್ತು.

ಈ ಎಲ್ಲ ಬೆಳವಣಿಗೆಗಳ ಅನಂತರ ವಿಧಾನಸಭೆ ಹಾಗೂ ಪರಿಷತ್ತಿನ 15 ವಿವಿಧ ಸಮಿತಿಗಳು ಹಾಗೂ ಜಂಟಿ ಸಮಿತಿಗಳ ಸಭೆಗಳು ಪ್ರಾರಂಭ ವಾಗಿವೆ. ಬಿಜೆಪಿ ಜತೆಗಿನ ಮೈತ್ರಿಯ ಭಾಗವಾಗಿ ಜೆಡಿಎಸ್‌ನ ಶಾಸಕರು ಕೂಡ ಈ ಸಭೆಗಳಲ್ಲಿ ಕಾಣಿಸಿಕೊಂಡಿಲ್ಲ. ವಿಪಕ್ಷದ ಪ್ರಾತಿನಿಧ್ಯವಿಲ್ಲದೆ ಕಳೆದ ಒಂದು ತಿಂಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ವಿವಿಧ ಸಮಿತಿಗಳ ಸಭೆ ನಡೆಸಲಾಗಿದೆ.ಇದು ಶಾಸನಾತ್ಮಕವಾಗಿ ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿವೆ. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರು, ಸ್ಪೀಕ‌ರ್ ಈ ಬಗ್ಗೆ ತುರ್ತು ಗಮನ ಹರಿಸುವುದು ಸೂಕ್ತ ಎಂಬ ಅಭಿಪ್ರಾಯ ಶಾಸಕರ ವಲಯದಿಂದಲೇ ವ್ಯಕ್ತವಾಗುತ್ತಿದೆ. ಶಾಸಕರ ಅಮಾನತು ಆದೇಶವನ್ನು ಶಾಸನಸಭೆಯಲ್ಲಿ ಮಂಡಿಸಿ ವಾಪಸ್ ಪಡೆಯಬೇಕು ಎನ್ನುವ ನಿಯಮ ಇರುವ ಹಿನ್ನೆಲೆಯಲ್ಲಿ ಪ್ರಕರಣವು ಕಗ್ಗಂಟಾಗಿದೆ. ಶಾಸನ ಸಭೆಯಲ್ಲಿ ಮಂಡಿಸಲು ಮುಂಗಾರು ಅಧಿವೇಶನದ ವರೆಗೆ ಕಾಯಬೇಕಿದೆ.

[t4b-ticker]
error: Content is protected !!