ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವ ಬಾಲಿವುಡ್ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್ ಇಂದು ಕ್ಷಮೆ ಯಾಚಿಸಿದ್ದಾರೆ.
ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕ್ಷಮೆ ಯಾಚಿಸಿದ್ದಾರೆ. ಇವರ ಇತ್ತೀಚಿನ ಹೇಳಿಕೆ ಬ್ರಾಹ್ಮಣ ಸಮುದಾಯವನ್ನು ಕೆರಳಿಸಿತ್ತು. ಸಾಕಷ್ಟು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಕ್ಷಮೆ ಕೋರಿದ್ದಾರೆ.
ಅನುರಾಗ್ ಕಶ್ಯಪ್ ಕ್ಷಮೆಯಾಚನೆ: “ಕೋಪದಲ್ಲಿ ವ್ಯಕ್ತಿಯೋರ್ವರಿಗೆ ಉತ್ತರಿಸುವಾಗ, ನಾನು ನನ್ನ ಇತಿಮಿತಿಗಳನ್ನು ಮರೆತು ಇಡೀ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇನೆ. ಆ ಸಮುದಾಯದ ಅನೇಕರು ನನ್ನ ಸಹೋದ್ಯೋಗಿಗಳು. ಜೊತೆಗೆ, ನನ್ನನ್ನು ಬೆಂಬಲಿಸುತ್ತಾರೆ. ಅವರೆಲ್ಲರೂ ನನ್ನಿಂದ ನೋವಿಗೊಳಗಾಗಿದ್ದಾರೆ. ನನ್ನ ಕುಟುಂಬಕ್ಕೂ ನನ್ನಿಂದ ನೋವಾಗಿದೆ. ನಾನು ಗೌರವಿಸುವ ಅನೇಕ ಬುದ್ಧಿಜೀವಿಗಳಿಗೆ, ನನ್ನ ಕೋಪ ಮತ್ತು ನನ್ನ ಮಾತನಾಡುವ ವಿಧಾನದಿಂದ ನೋವುಂಟಾಗಿದೆ. ನೋವುಂಟುಮಾಡಿದ ಪ್ರತಿಯೊಬ್ಬರಿಗೂ ಮನದಾಳದಿಂದ ಕ್ಷಮೆಯಾಚಿಸುತ್ತೇನೆ. ನಾನು ಇದನ್ನು ಈ ಸಮಾಜಕ್ಕೆ ಹೇಳಲು ಬಯಸಿರಲಿಲ್ಲ. ಆದರೆ ಕೋಪದಲ್ಲಿ, ಯಾರೋ ಒಬ್ಬರ ಚೀಪ್ ಕಾಮೆಂಟ್‌ಗೆ ಉತ್ತರಿಸುವಾಗ, ಈ ಹೇಳಿಕೆ ನೀಡಿದ್ದೇನೆ. ಹೀಗೆ ಮಾತನಾಡಿದ್ದಕ್ಕಾಗಿ ನಾನು ನನ್ನ ಎಲ್ಲಾ ಸಹೋದ್ಯೋಗಿಗಳಿಗೆ, ನನ್ನ ಕುಟುಂಬಕ್ಕೆ ಮತ್ತು ಆ ಸಮಾಜಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಇದು ಮತ್ತೆ ಸಂಭವಿಸಬಾರದು. ಆ ನಿಟ್ಟಿನಲ್ಲಿ ಮುಂದುವರೆಯುತ್ತೇನೆ. ಇನ್ಮುಂದೆ ಸಮಸ್ಯೆ ಬಗ್ಗೆ ಮಾತನಾಡಬೇಕಾದರೆ, ನಾನು ಸೂಕ್ತ ಪದಗಳನ್ನು ಬಳಸುತ್ತೇನೆ. ನೀವು ನನ್ನನ್ನು ಕ್ಷಮಿಸುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಅನುರಾಗ್ ವಿರುದ್ಧ ಪ್ರಕರಣ ದಾಖಲು: ಇತ್ತೀಚೆಗೆ ಸಿನಿಮಾವೊಂದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ, ನೆಟ್ಟಿಗರೋರ್ವರ ಕಾಮೆಂಟ್‌ಗೆ ಪ್ರತಿಕ್ರಿಯೆಯಾಗಿ ಅನುರಾಗ್ ಅವರಿಂದ ವಿವಾದಾದ್ಮಕ ಹೇಳಿಕೆ ಬಂದಿತ್ತು. ಈ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆಗಳು ನಡೆದವು. ಪ್ರಕರಣಗಳು ದಾಖಲಾದವು.
ಗೋವಿಂದ್ ಶರ್ಮಾ ಎಂಬವರು ನೀಡಿದ ದೂರಿನ ಮೇರೆಗೆ ವಾರಣಾಸಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅನುರಾಗ್ ಕಶ್ಯಪ್ ಅವರ ಹೇಳಿಕೆಯಿಂದ ನಮಗೆ, ನಮ್ಮ ಇಡೀ ಸಮಾಜಕ್ಕೆ ಬಹಳ ನೋವಾಗಿದೆ. ಸನಾತನ ಧರ್ಮವನ್ನು ವಿಭಜಿಸುವ ಪಿತೂರಿ ಇದು. ಅವರು ಒಂದಲ್ಲೊಂದು ರೀತಿಯಲ್ಲಿ ರಾಷ್ಟ್ರವಿರೋಧಿ ಎಂದು ಆರೋಪಿಸಿದ್ದರು.
ಇದಕ್ಕೂ ಮೊದಲು ಇಂದೋರ್‌ನ ಪಲಾಸಿಯಾ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಕಾರ್ಯಕರ್ತ ನೀರಜ್ ಯಾಗ್ನಿಕ್ ಎಂಬವರು ದೂರು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು. ನಿರ್ದೇಶಕರು ಬ್ರಾಹ್ಮಣರ ಕುರಿತು ಕೀಳುಮಟ್ಟದ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ವಿವಿಧ ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆ ನಡೆಸಿ, ಅವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದವು.













































