ಜಮ್ಮು – ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ಸುರಿಮಳೆಗೈದ ಉಗ್ರರು |ಕನ್ನಡಿಗನ ಸಹಿತ 27ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ: ಮೋದಿ ಸಂತಾಪ ಸ್ಥಳಕ್ಕೆ ವಿಶೇಷ ತಂಡ ಕಳುಹಿಸಿದ ಸಿಎಂ

Picture of Savistara

Savistara

Bureau Report

ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಲಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಹೇಯ ಕೃತ್ಯದಲ್ಲಿ ಕರ್ನಾಟಕದ ಶಿವಮೊಗ್ಗ ಮೂಲದ ಉದ್ಯಮಿಯೊಬ್ಬರು ಬಲಿಯಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿವಿಧ ಮೂಲಗಳಿಂದ ವರದಿಯಾಗಿದೆ.

ಪಹಲ್ಲಾಮ್‌ನ ಅತ್ಯಂತ ಸುಂದರವಾದ ಮತ್ತು ಪ್ರವಾಸಿಗರಿಂದ ಸದಾ ತುಂಬಿರುವ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ (ಇದನ್ನು ‘ಮಿನಿ ಸ್ವಿಟ್ಸರ್ಲೆಂಡ್’ ಎಂದೂ ಕರೆಯುತ್ತಾರೆ) ಮಧ್ಯಾಹ್ನದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪ್ರವಾಸಿಗರು ಕುದುರೆ ಸವಾರಿ ಮಾಡುತ್ತಾ. ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾ ಸಮಯ ಕಳೆಯುತ್ತಿದ್ದರು. ಈ ಸಂದರ್ಭದಲ್ಲಿ, ಸೇನಾ ಸಮವಸ್ತ್ರವನ್ನು ಹೋಲುವ ಉಡುಪು ಧರಿಸಿದ್ದ ಭಯೋತ್ಪಾದಕರು ಸ್ಥಳಕ್ಕೆ ಬಂದಿದ್ದಾರೆ.

ಪ್ರವಾಸಿಗರೊಂದಿಗೆ ಸೌಜನ್ಯದಿಂದ ಮಾತನಾಡಿಸುವ ನೆಪದಲ್ಲಿ ಅವರ ಹತ್ತಿರ ಬಂದ ಉಗ್ರರು, ಇದ್ದಕ್ಕಿದ್ದಂತೆ ತಮ್ಮ ಬಳಿ ಇದ್ದ ಬಂದೂಕುಗಳಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದಾಗಿ ಸ್ಥಳದಲ್ಲಿ ಆತಂಕ, ಗೊಂದಲ ಮತ್ತು ಭೀತಿಯ ವಾತಾವರಣ ನಿರ್ಮಾಣವಾಯಿತು. ಏನು ನಡೆಯುತ್ತಿದೆ ಎಂದು ಅರಿಯುವಷ್ಟರಲ್ಲಿಯೇ ಹಲವರು ಗುಂಡೇಟಿಗೆ ಬಲಿಯಾದರು ಮತ್ತು ಅನೇಕರು ಗಾಯಗೊಂಡರು.

ಆರರಿಂದ ಏಳು ಭಯೋತ್ಪಾದಕರು ಎರಡು ತಂಡಗಳನ್ನು ಮಾಡಿಕೊಂಡು ಪ್ರವಾಸಿಗರ ಮೇಲೆ ಅಟ್ಯಾಕ್ ಮಾಡಿದ್ದಾರೆ. ವಿವಿಧ ಸ್ಥಳದಲ್ಲಿದ್ದ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ಮಾಡಿ ಟೂರಿಸ್ಟ್‌ಗಳ ಜೀವ ತೆಗೆದಿದ್ದಾರೆ. ಪಹಲ್ಲಾಮ್ ಪಟ್ಟಣದ ಬೈಸರನ್ ಹುಲ್ಲುಗಾವಲಿನ ಪ್ರದೇಶದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಹೆಲಿಕಾಪ್ಟ‌ರ್ ಮೂಲಕ ಸ್ಥಳಾಂತರಿಸಲಾಗಿದೆ. 12 ಮಂದಿ ಪ್ರವಾಸಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಈ ಕೃತ್ಯವನ್ನು ಪ್ರಧಾನಿ ಮೋದಿಯವರು ಬಲವಾಗಿ ಖಂಡಿಸಿದ್ದಾರೆ. ಈ ಘೋರ ಕೃತ್ಯದ ಹಿಂದಿರುವವರನ್ನು ನ್ಯಾಯದ ಕಟಕಟೆಗೆ ತರಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.

ಸಾವು ನೋವಿನ ವಿವರ:

ಸಾವು: ವರದಿಗಳ ಪ್ರಕಾರ, ಈ ದಾಳಿಯಲ್ಲಿ 27 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಸಾವಿನ ನಿಖರ ಸಂಖ್ಯೆಯನ್ನು ಅಧಿಕೃತ ಮೂಲಗಳು ದೃಢೀಕರಿಸಬೇಕಿದೆ.

ಗಾಯಾಳುಗಳು: 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರಧಾನಿ ಮೋದಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಪಹಲ್ಲಾಮ್‌ನಲ್ಲಿ ನಡೆದ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಈ ಸಮಯದಲ್ಲಿ ಸಂತಾಪ ಸೂಚಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣವೇ ಭದ್ರತಾ ಪಡೆ, ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ದಾಳಿಕೋರರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಘಟನೆ ಕುರಿತು ಸಾಮಾಜಿಕ ಜಾಲತಾಣ `ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಘಟನೆಯಲ್ಲಿ ಮೃತಪಟ್ಟವರ ಸಾವಿನ ಸಂಖ್ಯೆ ಇನ್ನೂ ಖಚಿತಗೊಂಡಿಲ್ಲ. ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿ ಹೇಯ ಕೃತ್ಯವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ” ಎಂದು ತಿಳಿಸಿದ್ದಾರೆ.

ಕರ್ನಾಟಕದ ಉದ್ಯಮಿ ಬಲಿ:

ಈ ಪೈಶಾಚಿಕ ಕೃತ್ಯದಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀ ಮಂಜುನಾಥ್ ರಾವ್ ಅವರು ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ. ಅವರು ಪ್ರವಾಸಕ್ಕಾಗಿ ಪಹಲ್ಲಾಮ್‌ಗೆ ತೆರಳಿದ್ದರು. ಅವರ ಅಕಾಲಿಕ ಮತ್ತು ದುರಂತ ಸಾವಿನ ಸುದ್ದಿ ಶಿವಮೊಗ್ಗದಲ್ಲಿ ಹಾಗೂ ರಾಜ್ಯದಾದ್ಯಂತ ಆಘಾತವನ್ನುಂಟುಮಾಡಿದೆ.ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಯವರು ತಕ್ಷಣ ಕಾರ್ಯಪ್ರವತ್ತರಾಗುವಂತೆ ಸೂಚನೆ ನೀಡಿದರು.ಸಿಎಂ ಅವರ ಸೂಚನೆ ಮೇರೆಗೆ ಅಧಿಕಾರಿಗಳ ಒಂದು ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಪೊಲೀಸ್‌ ಅಧಿಕಾರಿಗಳೂ ತೆರಳಿದ್ದಾರೆ. ಮುಂದಿನ ಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂತೆ ದೆಹಲಿಯ ನಿವಾಸಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

[t4b-ticker]
error: Content is protected !!