ಬಾಂಗ್ಲಾದಲ್ಲಿ ಹೆಚ್ಚಾದ ಹಿಂಸಾಚಾರ; ನಾಯಕ ಅಜೀಜುರ್‌ ರೆಹಮಾನ್ ಹತ್ಯೆ

Picture of Savistara

Savistara

Bureau Report

ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಹಿಂಸಾಚಾರ ತಾರಕಕ್ಕೇರಿದೆ. ರಾಜಧಾನಿ ಢಾಕಾದಲ್ಲಿ ಮಂಗಳವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ‘ಸ್ವಚ್ಛಾಸೇಬಕ್ ದಳ’ದ ಮಾಜಿ ನಾಯಕ ಅಜೀಜುರ್ ರೆಹಮಾನ್ ಮುಸಬೀರ್ ಅವರನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಘಟನೆಯ ವಿವರ:ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (BNP) ಸ್ವಯಂಸೇವಕ ವಿಭಾಗವಾದ ‘ಢಾಕಾ ಮೆಟ್ರೋಪಾಲಿಟನ್ ನಾರ್ತ್ ಸ್ವೀಚ್ಛಸೇಬಕ್ ದಳ’ದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಜೀಜುರ್‌ ಅವರನ್ನು ಢಾಕಾದ ಜನದಟ್ಟಣೆಯ ವಾಣಿಜ್ಯ ಪ್ರದೇಶವಾದ ಕಾರ್ವಾನ್‌ ಬಜಾರ್‌ನಲ್ಲಿ ಗುರಿಯಾಗಿಸಲಾಗಿದೆ. ಬಶುಂಧರ ಸಿಟಿ ಶಾಪಿಂಗ್ ಕಾಂಪ್ಲೆಕ್ಸ್ ಬಳಿಯ ಹೋಟೆಲ್‌ವೊಂದರ ಎದುರು ರಾತ್ರಿ 8.30ರ ಸುಮಾರಿಗೆ ದುಷ್ಕರ್ಮಿಗಳು ಅತ್ಯಂತ ಹತ್ತಿರದಿಂದ ಗುಂಡು ಹಾರಿಸಿದ್ದಾರೆ. ಅಜೀಜುರ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚುನಾವಣಾ ಪೂರ್ವ ಹಿಂಸಾಚಾರ:ಬಾಂಗ್ಲಾದೇಶದಲ್ಲಿ ಫೆಬ್ರವರಿ 12 ರಂದು ಚುನಾವಣೆ ನಡೆಯಲಿದ್ದು, ಸದ್ಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ನಡುವೆಯೂ ರಾಜಕೀಯ ನಾಯಕರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಜುಬೋ ದಳದ ನಾಯಕನ ಮೇಲೆ ಗುಂಡಿನ ದಾಳಿ ನಡೆದಿತ್ತು. ಡಿಸೆಂಬರ್ 12 ರಂದು ಭಾರತ ವಿರೋಧಿ ಯುವ ನಾಯಕ ಉಸ್ಮಾನ್ ಹಾದಿ ಹತ್ಯೆಯಾಗಿದ್ದು, ದೊಡ್ಡ ಮಟ್ಟದ ಗಲಭೆಗೆ ಕಾರಣವಾಗಿತ್ತು.

ಭಾರತದ ಕಳವಳ:ಇನ್ನೊಂದೆಡೆ, ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯ ಜೊತೆಗೆ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಹಿಂದೂ ಸಮುದಾಯದವರ ಆಸ್ತಿ ಪಾಸ್ತಿ ಮತ್ತು ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ಸರ್ಕಾರ ತೀವ್ರ ಆತಂಕ ವ್ಯಕ್ತಪಡಿಸಿದ್ದು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.

[t4b-ticker]
error: Content is protected !!