ಹೊಸದಿಲ್ಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತಪೆಟ್ರೋಲ್ ನೀತಿಯಿಂದ ವಾಹನಗಳ ಕಾರ್ಯಕ್ಷಮತೆ ಕುಸಿಯುತ್ತಿದೆ ಎಂದು ಆರೋಪಿಸಿರುವ ‘ದಿಲ್ಲಿ ಟ್ಯಾಕ್ಸಿ ಆ್ಯಂಡ್ ಟೂರಿಸ್ಟ್ ಟ್ರಾನ್ಸ್‌ಪೋರ್ಟಸ್ ಮತ್ತು ಟೂರ್ ಆಪರೇಟರ್ಸ್ ಅಸೋಸಿಯೇಷನ್, ಈ ನೀತಿಯನ್ನು ವಿರೋಧಿಸಿ ಆಗಸ್ಟ್ 4ರಂದು ಸಂಸತ್ತಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.
ಮೈಲೇಜ್ ಕುಸಿತ, ಇಂಜಿನ್ ಸಮಸ್ಯೆ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಸಂಜಯ್ ಸಾಮ್ರಾಟ್, “ಸರ್ಕಾರ E20 (ಶೇ. 20 ಎಥೆನಾಲ್ ಮಿಶ್ರಿತ) ಇಂಧನ ಪರಿಚಯಿಸಿದ ನಂತರ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರಿಂದ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿದ್ದು, ಇಂಜಿನ್ ಬಾಳಿಕೆಯ ಬಗ್ಗೆ ಮಾಲೀಕರಲ್ಲಿ ಆತಂಕ ಸೃಷ್ಟಿಯಾಗಿದೆ. ವಿಶೇಷವಾಗಿ 2015ಕ್ಕಿಂತ ಮೊದಲು ತಯಾರಾದ ವಾಹನಗಳು ಈ ಇಂಧನಕ್ಕೆ ತಕ್ಕಂತೆ ವಿನ್ಯಾಸಗೊಂಡಿಲ್ಲ, ಹೀಗಾಗಿ ಹಳೆಯ ವಾಹನಗಳಿಗೆ ಇದರಿಂದ ಭಾರೀ ಹಾನಿಯಾಗುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಬೆಲೆ ಏರಿಕೆ ನಡುವೆ ಕಳಪೆ ಇಂಧನ?:
“ಜನರು ಪೂರ್ಣ ಪ್ರಮಾಣದ ಪೆಟ್ರೋಲ್‌ಗೆ ಹಣ ಪಾವತಿಸುತ್ತಿದ್ದಾರೆ ಮತ್ತು ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಹೀಗಿರುವಾಗ ನಮಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀಡಿ ಗ್ರಾಹಕರಿಗೆ ವಂಚಿಸುತ್ತಿರುವುದು ಏಕೆ?” ಎಂದು ಸಂಜಯ್ ಸಾಮ್ರಾಟ್ ಪ್ರಶ್ನಿಸಿದ್ದಾರೆ.
ಪರಾಮರ್ಶೆಗೆ ಆಗ್ರಹ:
ಪ್ರಸ್ತುತ ಜಾರಿಯಲ್ಲಿರುವ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯ ಬಗ್ಗೆ ಸ್ವತಂತ್ರ ವೈಜ್ಞಾನಿಕ ಪರಾಮರ್ಶೆ ನಡೆಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಈ ಪರಿಶೀಲನಾ ಪ್ರಕ್ರಿಯೆಯಲ್ಲಿ ಕೇವಲ ಅಧಿಕಾರಿಗಳಷ್ಟೇ ಅಲ್ಲದೆ, ವಾಹನ ತಯಾರಕರು, ಸಾರಿಗೆ ನಿರ್ವಾಹಕರು, ತಾಂತ್ರಿಕ ತಜ್ಞರು ಮತ್ತು ಗ್ರಾಹಕರನ್ನು ಒಳಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಆ ಮೂಲಕ ವಾಹನಗಳ ಮೇಲೆ ಈ ಇಂಧನದ ನೈಜ ಪರಿಣಾಮವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.









































