ಕರ್ನಾಟಕದಲ್ಲಿ ಬಿಜೆಪಿ (BJP) ಮತ್ತೊಮ್ಮೆ ಪಾದಯಾತ್ರೆ ನಡೆಸಲು ಮುಂದಾಗಿದೆ. ಬಳ್ಳಾರಿಯಿಂದ ಬೆಂಗಳೂರಿನ ಅರಮನೆ ಮೈದಾನದವರೆಗೆ ‘ಬಳ್ಳಾರಿ ಟು ಬೆಂಗಳೂರು ಚಲೋ’ (Ballary To Bengaluru Chalo) ಪಾದಯಾತ್ರೆಯನ್ನು ಆಯೋಜಿಸಲು ಪಕ್ಷ ಸಿದ್ಧತೆ ನಡೆಸಿದೆ. ಜನವರಿ 17ರಿಂದ ಫೆಬ್ರವರಿ 20ರವರೆಗೆ ಸುಮಾರು 20 ದಿನಗಳ ಕಾಲ ನಡೆಯಲಿರುವ ಈ ಯಾತ್ರೆಗೆ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದೆ. ಆದರೆ ಹೈಕಮಾಂಡ್‌ನ ಅನುಮತಿಗಾಗಿ ಕಾಯುತ್ತಿರುವ ನಾಯಕರು, ಗ್ರೀನ್ ಸಿಗ್ನಲ್ (Green Signal) ಸಿಕ್ಕ ಕೂಡಲೇ ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದ್ದಾರೆ.
ಬಳ್ಳಾರಿಯಲ್ಲಿ ಇತ್ತೀಚೆ ನಡೆದ ಗಲಭೆಯನ್ನು ಖಂಡಿಸಿ, ಕಾನೂನು ಸುವ್ಯವಸ್ಥೆಯ ವೈಫಲ್ಯ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಈ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಸದ್ಯ ಹೈಕಮಾಂಡ್ ಒಪ್ಪಿಗೆಗಾಗಿ ಕಾಯುತ್ತಿರುವ ನಾಯಕರು ದೊಡ್ಡ ಮಟ್ಟದಲ್ಲಿ ಪಾದಯಾತ್ರೆ ನಡೆಸಲು ಯೋಜನೆ ರೂಪಿಸಿದ್ದಾರೆ.
ಬಳ್ಳಾರಿ ಟು ಬೆಂಗಳೂರು ಚಲೋಗೆ ಬಿಜೆಪಿ ಪ್ಲಾನ್!
ಕಳೆದ ವಾರಗಳಲ್ಲಿ ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ವಿಚಾರಕ್ಕೆ ಗಲಭೆ ಉಂಟಾಗಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದರು. ಇದರ ನಂತರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ಇದನ್ನು ದೊಡ್ಡ ಹೋರಾಟಕ್ಕೆ ತೆಗೆದುಕೊಂಡಿದೆ. ಶಾಸಕ ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಈಗಾಗಲೇ ಈ ಚಲೋಗೆ ರೂಟ್ ಮ್ಯಾಪ್ ಸಿದ್ಧಪಡಿಸಿದ್ದು, ಅದನ್ನು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರಿಗೆ ಸಲ್ಲಿಸಲಾಗಿದೆ. ವಿಜಯೇಂದ್ರ ನಿನ್ನೆಯೇ ಹೈಕಮಾಂಡ್‌ಗೆ ಪತ್ರ ಬರೆದು ಅನುಮತಿ ಕೋರಿದ್ದಾರೆ. ಇಂದು ಅಥವಾ ನಾಳೆಯೊಳಗೆ ತೀರ್ಮಾನ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಗ್ರೀನ್ ಸಿಗ್ನಲ್ ಸಿಕ್ಕರೆ ಜನವರಿ 17ರಿಂದಲೇ ಪಾದಯಾತ್ರೆ ಆರಂಭ!ಹೈಕಮಾಂಡ್ನಿಂದ ಈ ಚಲೋಗೆ ಗ್ರೀನ್ ಸಿಗ್ನಲ್ ಸಿಕ್ಕರೆ ಜನವರಿ 17ರಂದೇ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ, ಅಂದಿನಿಂದಲೇ ಪಾದಯಾತ್ರೆ ಆರಂಭಿಸುವ ಯೋಜನೆಯಿದೆ. ಈ ಚಲೋದಲ್ಲಿ ಗಲಭೆಯನ್ನು ಖಂಡಿಸಿ, ಕಾನೂನು ಸುವ್ಯವಸ್ಥೆಯ ವೈಫಲ್ಯ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಈ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ.ಪಾದಯಾತ್ರೆಯು ಸುಮಾರು 300 ಕಿ.ಮೀ. ದೂರವನ್ನು ಆವರಿಸಲಿದ್ದು, ಬಳ್ಳಾರಿಯಿಂದ ಹೊರಟು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ. ಇದರಲ್ಲಿ ಪಕ್ಷದ ಹಿರಿಯ ನಾಯಕರು, ಶಾಸಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸರ್ಕಾರದ ವೈಫಲ್ಯಗಳು, ಕಾನೂನು ಸುವ್ಯವಸ್ಥೆಯ ಕುಸಿತ, ಪೊಲೀಸ್ ನೇಮಕಾತಿಯಲ್ಲಿ ಭ್ರಷ್ಟಾಚಾರ ಇತ್ಯಾದಿಗಳನ್ನು ಜನರ ಮುಂದಿಟ್ಟು ಹೋರಾಡುವುದು ಗುರಿಯಾಗಿದೆ.
ಸರ್ಕಾರದ ವಿರುದ್ಧದ ಜನಾಂದೋಲನ ಎಂದ ಬಿಜೆಪಿ!ಈ ಹಿಂದೆ ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ‘ಬಳ್ಳಾರಿ ಚಲೋ’ ಪಾದಯಾತ್ರೆ ನಡೆಸಿ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಡಿತ್ತು. ಈಗ ಬಿಜೆಪಿ ಅದೇ ರೂಪದಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತಿರುವುದು ರಾಜಕೀಯ ಆಸಕ್ತಿ ಮೂಡಿಸಿದೆ. ಸಿದ್ದರಾಮಯ್ಯ ಇದನ್ನು ಪ್ರಶ್ನಿಸಿ, ‘ಅಂದು ಅವರು ಏಕೆ ಮಾಡಬಾರದೆಂದರು, ಈಗ ಏಕೆ ಮಾಡುತ್ತಿದ್ದಾರೆ?’ ಎಂದು ಕಿಡಿಕಾರಿದ್ದಾರೆ. ಆದರೆ ಬಿಜೆಪಿ ನಾಯಕರು ಇದನ್ನು ಸರ್ಕಾರದ ವಿರುದ್ಧದ ಜನಾಂದೋಲನ ಎಂದು ಹೇಳುತ್ತಿದ್ದಾರೆ.
ಹೈಕಮಾಂಡ್ ತೀರ್ಮಾನದ ಮೇಲೆ ನಿಂತಿದೆ ಪಾದಯಾತ್ರೆ ಪ್ಲಾನ್!ಬಳ್ಳಾರಿ ಗಲಭೆಯ ನಂತರ ಹೈಕಮಾಂಡ್ ಜನಾರ್ದನ ರೆಡ್ಡಿಗೆ ಬೆಂಬಲ ಸೂಚಿಸಿದೆ. ನಿತಿನ್ ನಬಿನ್ ರೆಡ್ಡಿಯೊಂದಿಗೆ ಮಾತನಾಡಿ, ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಸೂಚಿಸಿದ್ದಾರೆ. ಇದರಿಂದ ಪಕ್ಷದೊಳಗೆ ಉತ್ಸಾಹ ಮೂಡಿದೆ. ಆದರೆ ರಾಜ್ಯ ನಾಯಕರು ಗಲಭೆಯನ್ನು ದೊಡ್ಡದು ಮಾಡದಂತೆ ಎಚ್ಚರ ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾದಯಾತ್ರೆಗೆ ಅನುಮತಿ ಸಿಕ್ಕರೆ ಇದು ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಬಿಜೆಪಿಗೆ ಜನರನ್ನು ಒಗ್ಗೂಡಿಸುವ ಅವಕಾಶವಾಗಲಿದೆ. ರಾಜ್ಯಾದ್ಯಂತದ ಕಾರ್ಯಕರ್ತರು ಈಗಾಗಲೇ ಉತ್ಸಾಹದಿಂದ ಸಿದ್ಧರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೈಕಮಾಂಡ್‌ನ ತೀರ್ಮಾನ ಏನು ಎಂಬುದನ್ನು ಕಾದು ನೋಡಬೇಕಿದೆ.













































