ಆರೆಸ್ಸ್ ಸ್ ಶತಾಬ್ದಿ ವರ್ಷ ಹಿನ್ನಲೆ ಸಮಾಜದಲ್ಲಿ ಪಂಚ ಪರಿವರ್ತನೆಯ ಉದ್ದೇಶದಿಂದ ಸುಳ್ಯ ತಾಲೂಕಿನ 14 ಮಂಡಲಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಅಂಗವಾಗಿ ಸುಳ್ಯ ತಾಲೂಕಿನ 14 ಮಂಡಲಗಳಲ್ಲಿ ಜ. 18 ರಿಂದ ಫೆ. 2 ರವರೆಗೆ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ.
ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ,ಸ್ವಾವಲಂಬನೆ ಮತ್ತು ರಾಷ್ಟ್ರೀಯ ಸ್ವಾಭಿಮಾನ,ನಾಗರಿಕ ಕರ್ತವ್ಯ ಎಂಬ ಪಂಚ ಪರಿವರ್ತನೆ ಧ್ಯೇಯದೊಂದಿಗೆ ಸಜ್ಜನಶಕ್ತಿಯ ಸಹಕಾರದೊಂದಿಗೆ ವಿಶೇಷ ಪ್ರಯತ್ನಗಳನ್ನು ಈ ಸಂಗಮದ ಮೂಲಕ ಮಾಡಲಿದ್ದೇವೆ ಎಂದು ಹಿಂದೂ ಸಂಗಮ ಸುಳ್ಯ ತಾಲೂಕು ಸಮಿತಿಯ ಪದಾಧಿಕಾರಿಗಳು ಜ.15 ರಂದು ಸುಳ್ಯ ಗಿರಿದರ್ಶಿನಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಸುಳ್ಯ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ಅಧ್ಯಕ್ಷ ಎಂ.ಬಿ.ಸದಾಶಿವ ರವರು ಮಾತನಾಡಿ “ಹಿಂದೂ ಸಂಗಮ ಪ್ರತಿಯೊಬ್ಬ ಕಾರ್ಯಕರ್ತರು ಗ್ರಾಮ ಗ್ರಾಮದ ಮನೆಗಳಿಗೆ ತೆರಳಿ ಸಂಗಮದ ಬಗ್ಗೆ ಮಾಹಿತಿ ನೀಡಲಿದ್ದು, ಪಂಚ ಪರಿವರ್ತನೆ’ಕಾರ್ಯಕ್ರಮ ಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಿ ‘ಸಮಾಜದ ಎಲ್ಲಾ ವರ್ಗಗಳನ್ನುಗೌರವದಿಂದ ಕಾಣುವುದು, ಎಲ್ಲರನ್ನೂ ಸಾಮರಸ್ಯ ದಿಂದ ಒಟ್ಟಿಗೆ ಕೊಂಡೊಯ್ಯುವ ಮೂಲಕ ಏಕತೆ ಮೂಡಿಸುವುದು ಈ ಮೂಲಕ ನಮ್ಮ ಸ್ನೇಹಿತ ಮತ್ತು ಕುಟುಂಬ ವಲಯದಲ್ಲಿ ಎಲ್ಲ ಜಾತಿ ಸಮುದಾಯದ ಜನರನ್ನು ಸೇರಿಸಿಕೊಳ್ಳುವುದು, ನಮ್ಮ ಕುಟುಂಬದ ಕಾರ್ಯಕ್ರಮಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅವರ ಕುಟುಂಬಗಳನ್ನು ಗೌರವಪೂರ್ವಕವಾಗಿ ಆಮಂತ್ರಿಸುವುದು, ನಮ್ಮ ಮನೆ ಅಥವಾ ನಾವು ಕೆಲಸ ಮಾಡುವ ಸ್ಥಾನದಲ್ಲಿ ಸೇವೆ ಮಾಡುತ್ತಿರುವ ಎಲ್ಲರ ಜೊತೆ ಆತ್ಮೀಯತೆಯ ವ್ಯವಹಾರ ನಡೆಸುವಂತೆ ಮಾಡುವುದಾಗಿದೆ. ಪರಿಸರ ಸಂರಕ್ಷಣೆ. ಪ್ರಕೃತಿಯು ನಮ್ಮೆಲ್ಲ ಜೀವಿಗಳ ತಾಯಿ. ಹೆಚ್ಚುತ್ತಿರುವ ಭೋಗ ಜೀವನದ ಪರಿಣಾಮವಾಗಿ ಪ್ರಕೃತಿಯ ಶೋಷಣೆ ನಿರಂತರ ನಡೆಯುತ್ತಿದ್ದು ಪಾಶ್ಚಾತ್ಕ ಮಾನದಂಡಗಳ ಆಧಾರದ ಮೇಲೆ ನಡೆದ ಅಭಿವೃದ್ಧಿಯಿಂದಾಗಿ ಕೇವಲ 500 ವರ್ಷಗಳಲ್ಲಿ ಪರಿಸರದ ಸಮತೋಲನ ಹದಗೆಟ್ಟಿದೆ. ಅನ್ನ, ನೀರು, ಗಾಳಿ, ಭೂಮಿ ಎಲ್ಲವೂ ವಿಷಮಯವಾಗುತ್ತಿವೆ, ಮಾಲಿನ್ಯದ ಅಪಾಯ ಬಹಳಷ್ಟು ಹೆಚ್ಚಿದೆ.

ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮೂರು ಕೆಲಸವನ್ನು ನಾವೆಲ್ಲರೂ ಮಾಡುವುದು.ನೀರಿನ ಮಿತ ಬಳಕೆ,ಮರಗಳನ್ನು ನೆಡುವುದು. ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು. ಏಕಬಳಕೆ ಪ್ಲಾಸ್ಟಿಕನ್ನು ಸಂಪೂರ್ಣ ತ್ಯಜಿಸುವುದು.ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದನ್ನು ಸಂರಕ್ಷಿಸುವ ಚಟುವಟಿಕೆಗಳನ್ನು ಸಮಾಜದ ಸಹಭಾಗಿತ್ವದೊಂದಿಗೆ ವ್ಯಾಪಕವಾಗಿ ಮಾಡಬೇಕಾಗಿದೆ. ಮೂರನೆಯದಾಗಿ ಕುಟುಂಬ ಪ್ರಬೋಧನ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಕುಟುಂಬಗಳ ಪಾತ್ರ ಅತ್ಯಂತ ಮಹತ್ವವಾಗಿದ್ದು ನಮ್ಮ ಸಂಸ್ಕೃತಿ, ಮೌಲ್ಯಗಳು ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿರುವುದು ಕುಟುಂಬ ವ್ಯವಸ್ಥೆಯ ಕಾರಣದಿಂದಲೇ.ಇತ್ತೀಚಿನ ವರ್ಷಗಳಲ್ಲಿ ನಗರೀಕರಣ, ಪಾಶ್ಚಾತ್ಮ ಸಂಸ್ಕೃತಿಯ ಪ್ರಭಾವ, ಬದಲಾಗುತ್ತಿರುವ ಜೀವನಶೈಲಿ ಇತ್ಯಾದಿ ಕಾರಣಗಳಿಂದ ಈ ಕುಟುಂಬ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವುದು ಕಂಡು ಬರುತ್ತಿದ್ದು ಗಂಭೀರ ಚಿಂತೆಯ ವಿಷಯವಾಗಿದೆ.ಆದ್ದರಿಂದ ಪ್ರತಿಯೊಂದು ಕುಟುಂಬದಲ್ಲೂ ಎಲ್ಲಾ ಸದಸ್ಯರು ಆಗಾಗ್ಗೆ ಒಟ್ಟಿಗೆ ಸೇರಿ ಮಾತುಕತೆ, ಭಜನೆ, ಸದ್ವಿಚಾರಗಳ ಬಗ್ಗೆ ಚರ್ಚೆ, ಒಟ್ಟಿಗೆ ಕೂತು ಭೋಜನ, ನೆರೆಕೆರೆಯ ಕೆಲ ಕುಟುಂಬಗಳ ಜತೆ ಸೇರಿ ಕುಟುಂಬ ಮಿಲನ್ (ಸತ್ಸಂಗ), ಅಲ್ಲಿ ಕುಟುಂಬದ ಉತ್ತಮ ಸಂಪ್ರದಾಯ-ರೂಢಿಗಳ ಬಗ್ಗೆ ವಿಚಾರ ವಿನಿಮಯ ಈ ರೀತಿ ಕೌಟುಂಬಿಕ ಮೌಲ್ಯಗಳನ್ನು ಗಟ್ಟಿಗೊಳಿಸುವಂಥ ಚಟುವಟಿಕೆಗಳು ನಡೆಸುವುದು,ನಾಲ್ಕನೆಯದಾಗಿ `ಸ್ವ’ ಆಧಾರಿತ ಜೀವನ. ಈ ಮಣ್ಣಿನ ವಿಚಾರ, ಮೌಲ್ಯಗಳು ಮತ್ತು ಸಂಪನ್ಮೂಲಗಳ ಆಧಾರದ ಮೇಲೆ ರಾಷ್ಟ್ರಜೀವನವನ್ನು ರೂಪಿಸಬೇಕು, ಆ ಮೂಲಕ ಭಾರತವು ಒಂದು ಸ್ವಾವಲಂಬಿ, ಬಲಿಷ್ಠ ರಾಷ್ಟ್ರವಾಗಿ ಎದ್ದು ನಿಲ್ಲುವಂತಾಗಬೇಕು.
ಸ್ವ ಆಧಾರಿತ ಜೀವನ’ದ ತಾತ್ಪರ್ಯವಿದು. ಸ್ವದೇಶಿ ಜೀವನಶೈಲಿಯನ್ನು ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಕುಟುಂಬವೂ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಭಾರತವು ಆತ್ಮನಿರ್ಭರವಾಗುತ್ತದೆ. ನಮ್ಮ ಮಾತೃಭಾಷೆ, ನಮ್ಮ ಉಡುಗೆ ತೊಡುಗೆ, ನಮ್ಮ ಸಂಸ್ಕೃತಿ ಪರಂಪರೆಗಳ ಬಗ್ಗೆ ಅಭಿಮಾನ ಇಟ್ಟುಕೊಂಡು ಜೀವನದಲ್ಲಿ ಅನುಸರಿಸಬೇಕು. ನಾಗರಿಕ ಕರ್ತವ್ಯಪ್ರಜ್ಞೆ:ಸಂವಿಧಾನ, ಕಾನೂನು, ನಿಯಮ, ಶಿಸ್ತುಗಳನ್ನು ಎಲ್ಲರೂ ಎಲ್ಲ ಸಂದರ್ಭಗಳಲ್ಲೂ ಪಾಲಿಸಬೇಕು. ಯಾವುದೇ ಪ್ರಚೋದನಕಾರಿ ಘಟನೆ ನಡೆದಾಗಲೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನು ಬಾಹಿರವಾಗಿ ವರ್ತಿಸಬಾರದು. ಇಂದು ದೇಶಕ್ಕಾಗಿ 24 ಗಂಟೆ ಬದುಕುವ ಅವಶ್ಯಕತೆ ಇದೆ. ಸಣ್ಣಪುಟ್ಟ ವಿಷಯಗಳಲ್ಲೂ ಎಲ್ಲರ ಬಗ್ಗೆ, ದೇಶ ಮತ್ತು ಸಮಾಜದ ಬಗ್ಗೆ ಕಾಳಜಿ ಇರಬೇಕು.
ಇದು ನನ್ನಿಂದಲೇ ಆರಂಭವಾಗಬೇಕು’ ಎಂದು ಪ್ರತಿಯೊಬ್ಬರೂ ನಿಶ್ಚಯಿಸಿ ಕಾರ್ಯಪ್ರವೃತ್ತರಾಗಬೇಕು. ಆಗ ಇದು ನಮ್ಮಿಂದ ಸಮಾಜಕ್ಕೂ, ಆ ಮೂಲಕ ಇಡೀ ದೇಶಕ್ಕೂ ವ್ಯಾಪಿಸುತ್ತದೆ ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಸ್.ಪಿ.ಯವರು ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಬಗ್ಗೆ ಮಾತನಾಡಿ 18 ರಂದು ಬಾಳಿಲ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಜೆ 3:30 ರಿಂದ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಗುತ್ತಿಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 3:30ಕ್ಕೆ ಮುತ್ತಪ್ಪ ಗುಡಿ ಬಳಿಯಿಂದ ಶೋಭಾ ಯಾತ್ರೆ ನಡೆದು ನಾಲ್ಕು ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಜನವರಿ 24ರಂದು ಸುಬ್ರಹ್ಮಣ್ಯ ಮಠದ ಆವರಣದಲ್ಲಿ ಸಾಯಂಕಾಲ ಮೂರು ರಿಂದ ಕಾಶಿ ಕಟ್ಟೆಯಿಂದ ಶೋಭಾ ಯಾತ್ರೆ ಆರಂಭಿಸಿ 3:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಜನವರಿ 25ರಂದು ಅರಂತೋಡು,
ಪೆರಾಜೆ ಜ್ಯೋತಿ ಪ್ರೌಢಶಾಲಾ ಮೈದಾನದಲ್ಲಿ 3:30 ರಿಂದ ಶೋಭಾ ಯಾತ್ರೆ ನಡೆಯಲಿದೆ. ಅದೇ ದಿನ ಅಜ್ಜಾವರ ಮೇನಾಲ ಬೆಳಂತಿಮಾರು ಗದ್ದೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಎರಡು 30 ರಿಂದ ವಿಷ್ಣು ನಗರ ಮತ್ತು ನಿರಂತಮಜಲು ಭಾಗದಿಂದ ಶೋಭಾ ಯಾತ್ರೆ ಆರಂಭಗೊಂಡು 3:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಜಾಲ್ಸೂರು ಜೆಕೆ ಮೈದಾನ ದಲ್ಲಿ ಸಂಜೆ 4:45ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು 3.30ರಿಂದ ಅಯ್ಯಪ್ಪ ದೇವಸ್ಥಾನ ಅಡ್ಕಾರು ಇಲ್ಲಿಂದ ಶೋಭಾ ಯಾತ್ರೆ ನಡೆಯಲಿದೆ. ಜ. 25 ರಂದು ಪಂಜ ದೀನದಯಾಳ ಸಂಕೀರ್ಣದ ಎದುರು ಸಂಜೆ 3:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸಂಜೆ 3 ರಿಂದ ಶೋಭಾ ಯಾತ್ರೆ ನಡೆಯಲಿದೆ. ಅದೇ ದಿನ ದೊಡ್ಡ ತೋಟ, ಎಲಿಮಲೆ ಜ್ಞಾನದೀಪ ಶಾಲೆಯಲ್ಲಿ ಸಂಜೆ 4:30ಕ್ಕೆ ಸಭಾ ಕಾರ್ಯಕ್ರಮ ಮಧ್ಯಾಹ್ನ 2:30ಕ್ಕೆ ಎಲಿಮಲೆ ಕೆಳಗಿನ ಪೇಟೆಯಿಂದ ಶೋಭಾ ಯಾತ್ರೆ ನಡೆಯಲಿದೆ.
ಜನವರಿ 25 ರಂದು ಸುಳ್ಯ ನಗರದ ಪ್ರಭು ಮೈದಾನದಲ್ಲಿ ಸಾಯಂಕಾಲ ಸಭಾ ಕಾರ್ಯಕ್ರಮ ನಡೆಯಲಿದ್ದು ಮಧ್ಯಾಹ್ನ 3:30 ರಿಂದ ಜ್ಯೋತಿ ವೃತ್ತ ಮತ್ತು ವಿಷ್ಣು ಸರ್ಕಲ್ ನಿಂದ ಶೋಭಾ ಯಾತ್ರೆ ನಡೆಯಲಿದೆ. ಫೆ. 1 ರಂದು ಕಲ್ಲುಗುಂಡಿ ಒತ್ತೆಕೋಲ ಗದ್ದೆಯಲ್ಲಿ ಸಂಜೆ 4:00ಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಮಧ್ಯಾಹ್ನ 12:30ಕ್ಕೆ ಶೋಭಾ ಯಾತ್ರೆ ಕೂಲಿಶೆಡ್ ಬಳಿಯಿಂದ ನಡೆಯಲಿದೆ.ಫೆ.1 ರಂದು ಐವರ್ನಾಡು,ಬೆಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಮದ್ಯಾಹ್ನ 3.30 ರಿಂದ ಬೆಳ್ಳಾರೆ ಮುಖ್ಯರಸ್ತೆಯಲ್ಲಿ ಶೋಭಾ ಯಾತ್ರೆ, 4.00 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.ಫೆ.1 ರಂದು ಎಣ್ಮೂರು ಕೃಷ್ಣ ಲೀಲಾ ಮೈದಾನ ಮುರುಳ್ಯ ದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಫೆ.2 ರಂದು ಹರಿಹರ ಕೂಜುಗೋಡು ಕಟ್ಟೆಮನೆ ದಿ. ತಮ್ಮಯ್ಯ ಗೌಡ ಕ್ರೀಡಾಂಗಣದಲ್ಲಿ ನಡೆಯಲಿದೆ. 14 ಮಂಡಲಗಳಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಗೌರವ ಸಲಹೆಗಾರರಾದ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಮತ್ತು ಯಶೋದಾ ರಾಮಚಂದ್ರ , ಸಂಚಾಲಕ ಚಂದ್ರಶೇಖರ ನಲ್ಲೂರಾಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಸಂಗಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕರು ಹಾಗೂ ಉಪ ಸಂಚಾಲಕರುಗಳು ಉಪಸ್ಥಿತರಿದ್ದರು.













































