Savistara Kannada

Latest Post

ಅತೀ ಶೀಘ್ರವಾಗಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ


ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಅನಧಿಕೃತ ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಿರುವುದನ್ನು ಮಾನವೀಯ ನೆಲೆಯಲ್ಲಿ, ಕಾನೂನಾತ್ಮಕವಾಗಿ ಮತ್ತೆ ಅವಕಾಶ ನೀಡುವಂತೆ ಸಂಸದ ಬ್ರಿಜೇಶ್ ಚೌಟರಿಂದ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.



 ಅದೆಷ್ಟೋ ವರುಷಗಳಿಂದ ಬೀದಿ ಬದಿ ವ್ಯಾಪಾರ ನಂಬಿ ಜೀವನ ಸಾಗಿಸುತಿದ್ದ ಸುಬ್ರಮಣ್ಯ ಪರಿಸರದ ಕೆಲ ನಿವಾಸಿಗಳಿಗೆ ಅಗಂಡಿ ತೆರವು ಬಳಿಕ ಜೀವನ ನಡೆಸಲು ಕಷ್ಟವಾಗಿತ್ತು. ಆದ್ದರಿಂದ ಕಡಬಕ್ಕೆ ಜ.13 ರಂದು ಆಗಮಿಸಿದ್ದ ಸಂಸದರನ್ನು ಭೇಟಿ ಮಾಡಿದ ಬೀದಿ ಬದಿ ವ್ಯಾಪಾರಿಗಳು ಮತ್ತೆ ಅಂಗಡಿ ತೆರಯಲು ಅವಕಾಶ ನೀಡುವಂತೆ ಮನವಿ ಅರ್ಪಿಸಿದ್ದರು. ಮನವಿಗೆ ಸ್ಪಂದಿಸಿದ ಸಂಸದರು ಜಿಲ್ಲಾಧಿಕಾರಿಗಳಿಗೆ ಮತ್ತು ಪುತ್ತೂರು ಉಪ ವಿಭಾಗ ಅಧಿಕಾರಿಯೊಂದಿಗೆ ಚರ್ಚಿಸಿ, ಅತೀ ಶೀಘ್ರವಾಗಿ ಬೀದಿ ವ್ಯಾಪಾರಿಗಳಿಗೆ, ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿ, ಅಧಿಕಾರಿಗಳಿಗೆ ಸೂಚಿಸಿದರು.

ಸಂಕಷ್ಟದಲ್ಲಿ ಇದ್ದ ಬೀದಿ ವ್ಯಾಪಾರಿಗಳ ಸ್ಪಂದನೆಗೆ ನೆರವಾದ, ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



 


ಮುಂಬೈ: 'ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂವಿಧಾನ ರಚನೆಕಾರರಲ್ಲ. ರಾಜಕೀಯ ಲಾಭಕ್ಕಾಗಿ ಶ್ರೀರಾಮನನ್ನು ಬಳಸಿಕೊಳ್ಳುವುದು ಸರಿಯಲ್ಲ' ಎಂದು ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

“ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಗೊಂಡ ದಿನ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು' ಎಂಬ ಭಾಗವತ್ ಹೇಳಿಕೆಗೆ ರಾವುತ್‌ ಪ್ರತಿಕ್ರಿಯೆ ನೀಡಿದ್ದಾರೆ.


“ಆರ್‌ಎಸ್‌ಎಸ್‌ ಮುಖ್ಯಸ್ಥರು ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಆದರೆ, ಅವರು ಸಂವಿಧಾನ ರಚನೆಕಾರರಲ್ಲ. ಅವರು ಈ ದೇಶದ ಕಾನೂನನ್ನು ರಚಿಸುವುದಕ್ಕಾಗಲಿ ಅಥವಾ ಬದಲಿಸುವುದಕ್ಕಾಗಲಿ ಆಗುವುದಿಲ್ಲ. ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿರುವುದು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಈ ಕಾರ್ಯಕ್ಕೆ ಎಲ್ಲರು ಕೊಡುಗೆ ನೀಡಿದ್ದಾರೆ. ಆದರೆ, ಅದೇ ದಿನ ದೇಶಕ್ಕೆ ಸ್ವಾತಂತ್ರ್ಯ ದಕ್ಕಿದೆ ಎನ್ನುವುದು ಅತಿಶಯೋಕ್ತಿ' ಎಂದು ರಾವುತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

'1947ರಲ್ಲಿಯೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ರಾಜಕೀಯ ಲಾಭಕ್ಕಾಗಿ ರಾಮನನ್ನು ಬಳಸಿಕೊಳ್ಳುವುದು ಸರಿಯಲ್ಲ' ಎಂದಿದ್ದಾರೆ.'ಸಾವಿರಾರು ವರ್ಷಗಳ ಹಿಂದೆಯೇ ಈ ನೆಲದಲ್ಲಿ ಶ್ರೀರಾಮ ನೆಲೆಸಿದ್ದಾನೆ. ಅವನಿಗಾಗಿ ನಾವು ಹೋರಾಟ ನಡೆಸಿದ್ದೇವೆ ಮತ್ತು ಆ ಹೋರಾಟವನ್ನು ಮುಂದುವರಿಸುತ್ತೇವೆ. ರಾಮನನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದರಿಂದ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕುವುದಿಲ್ಲ' ಎಂದು ಹೇಳಿದರು.


 


ಶಬರಿಮಲೆ: ಇಲ್ಲಿನ ಪ್ರಸಿದ್ಧ ಅಯ್ಯಪ್ಪ ದೇಗುಲದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಅಂಗವಾಗಿ ಲಕ್ಷಾಂತರ ಭಕ್ತಾದಿಗಳು ಪೂಜೆ ಸಲ್ಲಿಸಿ, ಮಕರಜ್ಯೋತಿಯನ್ನು ಕಣ್ಣುಂಬಿಕೊಂಡರು.

ಸಂಜೆ ದೀಪಾರಾಧನೆ ಬಳಿಕ ಪೊನ್ನಂಬಲ ಮೇಡು ಬೆಟ್ಟದ ಪೂರ್ವ ತುದಿಯಲ್ಲಿ 'ಮಕರವಿಳಕ್ಕು' ಜ್ಯೋತಿ ಕಾಣಿಸಿಕೊಂಡಿತು. ಲಕ್ಷಾಂತರ ಭಕ್ತರು ಒಕ್ಕೊರಲಿನಿಂದ 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಭಕ್ತಿಯಿಂದ ಜಪಿಸಿದರು.

ಮಕರಜ್ಯೋತಿ ದರ್ಶನಕ್ಕಾಗಿ ವಿವಿಧ ರಾಜ್ಯಗಳ ಸಾವಿರಾರು ಭಕ್ತರು ಕಳೆದ ಕೆಲ ದಿನಗಳಿಂದ ದೇಗುಲದಲ್ಲಿಯೇ ಉಳಿದುಕೊಂಡಿದ್ದರು.

ದೀಪಾರಾಧನೆಗೆ ಮೊದಲು ಸಂಜೆ 6 ಗಂಟೆಯ ಹೊತ್ತಿಗೆ ಪಾಂಡಲಂ ಅರಮನೆಯಿಂದ ತಿರುವಾಭರಣ ಮೆರವಣಿಗೆ ಸನ್ನಿಧಾನಕ್ಕೆ ತಲುಪಿತು. ಪ್ರತಿ ವರ್ಷ ದೇಗುಲಕ್ಕೆ ಸುಮಾರು 5 ಕೋಟಿ ಭಕ್ತಾದಿಗಳು ಭೇಟಿ ನೀಡುತ್ತಾರೆ ಎಂದು ತಿರುವನಾಂಕೂರು ದೇವಸ್ಥಾನ ಮಂಡಳಿ ತಿಳಿಸಿದೆ.ಜನವರಿ 20ರವರೆಗೆ ಅಯ್ಯಪ್ಪ ದೇಗುಲವನ್ನು ತೆರೆದಿರಲಾಗಿರುತ್ತದೆ.

 ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ದಕ್ಷಿಣ ಚಿತ್ರರಂಗದ ಖ್ಯಾತ ತಾರೆ ಚಿರಂಜೀವಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.



ನವದೆಹಲಿ: ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಕಳೆಗಟ್ಟಿದೆ. ವಿವಿಧ ರಾಜ್ಯಗಳಲ್ಲಿ ಇದನ್ನು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಪೊಂಗಲ್ ಹಬ್ಬವನ್ನು ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಅದರಂತೆ ಈ ಬಾರಿಯೂ ಸೆಲೆಬ್ರಿಟಿಗಳು ಪೊಂಗಲ್ ಅನ್ನು ಬಹಳ ಆಡಂಬರದಿಂದ ಆಚರಿಸಿದ್ದಾರೆ.


ಸೆಲೆಬ್ರಿಟಿಗಳ ಪೈಕಿ ದಕ್ಷಿಣ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಅವರ ಪೊಂಗಲ್ ಆಚರಣೆ ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಹೈಲೆಟ್​ ಆಗಿದೆ. ಏಕೆಂದರೆ, ಈ ಬಾರಿ ಚಿರಂಜೀವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಬ್ಬ ಆಚರಿಸಿದ್ದಾರೆ. ಫೋಟೋ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಸೌತ್​ ಸಿನಿಮಾ ಇಂಡಸ್ಟ್ರಿಯ ಮೆಗಾಸ್ಟಾರ್ ಚಿರಂಜೀವಿ ಅವರು ದೆಹಲಿಯಲ್ಲಿರುವ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರ ನಿವಾಸದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಪೊಂಗಲ್ ಆಚರಿಸಿದ್ದಾರೆ. ಈ ಹಬ್ಬದ ಆಚರಣೆಯಲ್ಲಿ ಭಾರತದ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ. ಸಿಂಧು ಕೂಡಾ ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಕಳೆದ ದಿನ ನಾನು ಅತ್ಯಂತ ಸ್ಮರಣೀಯ ಸಂಕ್ರಾಂತಿ ಮತ್ತು ಪೊಂಗಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ಹಬ್ಬವು ಒಗ್ಗಟ್ಟಿನ ಬಂಧಗಳನ್ನು ಬಲಪಡಿಸಲಿ, ಸಮೃದ್ಧಿಯನ್ನು ತರಲಿ ಜೊತೆಗೆ ನಮ್ಮ ಸಾಂಸ್ಕೃತಿಕ ಸಂಪ್ರದಾಯಗಳನ್ನು ಖುಷಿ ಮತ್ತು ಕೃತಜ್ಞತೆಯಿಂದ ಆಚರಿಸಲು ನಮಗೆ ಸ್ಫೂರ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್​​ನಲ್ಲಿ, ನನ್ನ ಸಚಿವ ಸಹೋದ್ಯೋಗಿ ಜಿ.ಕಿಶನ್ ರೆಡ್ಡಿ ಗಾರು ನಿವಾಸದಲ್ಲಿ ನಡೆದ ಸಂಕ್ರಾಂತಿ ಮತ್ತು ಪೊಂಗಲ್ ಆಚರಣೆಗಳಲ್ಲಿ ಭಾಗವಹಿಸಿದ್ದೆ. ಅತ್ಯುತ್ತಮ ಸಾಂಸ್ಕೃತಿಕ ಸಮಾರಂಭಕ್ಕೆ ಸಾಕ್ಷಿಯಾದೆ. ಭಾರತದಾದ್ಯಂತ ಜನರು ಸಂಕ್ರಾಂತಿ ಮತ್ತು ಪೊಂಗಲ್ ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಇದು ನಮ್ಮ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿರುವ ಕೃತಜ್ಞತೆ, ಸಮೃದ್ಧಿಯ ಆಚರಣೆ ಆಗಿದೆ. ಸಂಕ್ರಾಂತಿ ಮತ್ತು ಪೊಂಗಲ್‌ಗೆ ನನ್ನ ಶುಭಾಶಯಗಳು. ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಮುಂದೆ ಸಮೃದ್ಧ ಸುಗ್ಗಿಯ ಕಾಲ ಬರಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

ಸಿನಿಮಾ ಬಗ್ಗೆ ಗಮನಿಸೋದಾದ್ರೆ, ಬಹುಬೇಡಿಕೆ ನಟ ಚಿರಂಜೀವಿ ಶೀಘ್ರದಲ್ಲೇ ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು, ಅವರು 2023ರಲ್ಲಿ ವಾಲ್ಟೈರ್ ವೀರಯ್ಯ ಮತ್ತು ಭೋಲಾ ಶಂಕರ್ ಚಿತ್ರಗಳಲ್ಲಿ ಕಾಣಿಸಿಕೊಂಡರು. ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಅವರ ಮುಂಬರುವ ಚಿತ್ರಗಳಲ್ಲಿ ವಿಶ್ವಂಭರ ಕೂಡಾ ಒಂದು.


 ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಚಿವ ಆರ್.​ಬಿ. ತಿಮ್ಮಾಪುರ ಹೇಳಿದ್ದಾರೆ.



ಹುಬ್ಬಳ್ಳಿ: ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಜೋರಾಗಿದ್ದು, ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಆಗುತ್ತಿರುವ ಮುಜುಗರ ತಡೆಯಲು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. ಸಭೆಯಲ್ಲಿ ಸುರ್ಜೇವಾಲಾ, ಎಲ್ಲರೂ ಶಿಸ್ತು ಅನುಸರಿಸಬೇಕು. ಯಾರೂ ಶಿಸ್ತು ಉಲ್ಲಂಘಿಸುವಂತಿಲ್ಲ ಎಂದು ಖಡಕ್​​​ ಸೂಚನೆಯನ್ನು ಕೊಟ್ಟಿದ್ದರು. ಇಷ್ಟಾದರೂ ಸಚಿವ ಆರ್.​ಬಿ. ತಿಮ್ಮಾಪುರ, ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು? ಎಂದು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.


ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ದಲಿತರು ಯಾಕೆ ಸಿಎಂ ಆಗಬಾರದು?. ಮುಖ್ಯಮಂತ್ರಿ ಮಾಡಿದರೆ ಯಾರು ಬೇಡ ಅಂತಾರೆ. ನನಗೆ ಅಷ್ಟು ಶಕ್ತಿ ಇದೆಯೋ ಇಲ್ವೋ, ಸಿಎಲ್‌ಪಿ ಅಲ್ಲಿ ನನ್ನ ಒಪ್ಪುತ್ತಾರೋ ‌ ಇಲ್ವೋ. ಇವೆಲ್ಲವೂ ಪರಿಗಣನೆಗೆ ಬರುತ್ತದೆ. ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ" ಎಂದು ಹೇಳಿದರು.

"ನಾನು ದಲಿತ , ನಾನು ಯಾಕೆ ಆಗಬಾರದು?. ದಲಿತರೂ ಸಿಎಂ ಆಗಬೇಕು, ಮತ್ತೊಬ್ಬರೂ ಸಿಎಂ ಆಗಬೇಕು. ಆದರೆ ಇದ್ಯಾವುದೂ ಬೆಳವಣಿಗೆ ಸದ್ಯಕ್ಕೆ ಇಲ್ಲ. ಸಿಎಲ್‌ಪಿಯಲ್ಲಿ ಎಲ್ಲವೂ ತೀರ್ಮಾನ ಆಗಬೇಕು. ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರುತ್ತೆ. ನಮ್ಮಲ್ಲಿ ಅಂತಹದ್ದೇನೂ ಇಲ್ಲ ಎಂದ ಅವರು, ದಲಿತ ಶಾಸಕರ ಡಿನ್ನರ್ ಸಭೆ ರದ್ದಾಗಿಲ್ಲ, ಮುಂದೂಡಿದ್ದೇವೆ" ಎಂದು ತಿಳಿಸಿದರು.


ಹಸುಗಳ ಕೆಚ್ಚಲು ಕೊಯ್ದಿದ್ದನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿರುವ ವಿಚಾರವಾಗಿ ಮಾತನಾಡಿದ ಅವರು, "ದಲಿತರ ಕೊಲೆಯಾಗುತ್ತದೆ. ಆಗ ಯಾರಾದರೂ ಪ್ರತಿಭಟನೆ ಮಾಡಿದ್ದಾರಾ?. ದುಷ್ಟರನ್ನು ಬಲಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆದರೆ ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ" ಎಂದರು.

ಉತ್ತರ ಕರ್ನಾಟಕದವರು ಸಿಎಂ ಆದ್ರೆ ಸ್ವಾಗತ - ಎಸ್.​ಆರ್. ಪಾಟೀಲ್: ಮತ್ತೊಂದೆಡೆ, ಕಾಂಗ್ರೆಸ್ ಹಿರಿಯ ಮುಖಂಡ ಎಸ್.​ಆರ್.​ ಪಾಟೀಲ್ ಮಾತನಾಡಿ, "ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಪ್ರತಿಯೊಬ್ಬ ಶಾಸಕರಿಗೂ ಮಂತ್ರಿ ಸ್ಥಾನದ ಬಗ್ಗೆ ಆಸೆ ಇರುತ್ತದೆ. ಯಾರು ಕೂಡ ಸನ್ಯಾಸಿಗಳಲ್ಲ. ಅವಕಾಶ ಮಾಡಿಕೊಡಿ ಅಂತ ಸಹಜವಾಗಿ ಎಲ್ಲರೂ ಕೇಳುತ್ತಾರೆ" ಎಂದು ಹೇಳಿದರು.


ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲ್ ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, "ಪಕ್ಷದ ಶಿಸ್ತು ಉಲ್ಲಂಘನೆ ಆದ್ರೆ ಪಕ್ಷ ಶಿಥಿಲ ಆದಂತಾಗುತ್ತೆ. ಹೀಗಾಗಿ ಮಾಧ್ಯಮದ ಎದುರು ಹೋಗಬೇಡಿ ಅಂದಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತಮ್ಮ ವಿಚಾರಗಳನ್ನು ಹೇಳಬಹುದಲ್ಲ, ಅದರ ಬದಲು ಮಾಧ್ಯಮಗಳ ಮುಂದೆ ಹೋಗಿ ಹೇಳಿದ್ರೆ ಸಮಸ್ಯೆ ಬಗೆ ಹರಿಯೋದಿಲ್ಲ. ಆ ದೃಷ್ಟಿಯಿಂದ ಸುಜೇವಾಲಾ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ" ಎಂದರು.


ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿ, "ರಾಜಕೀಯದಲ್ಲಿ ಕಾರ್ಯಕರ್ತರು ಶಾಸಕರಾಗಬೇಕು ಅಂತಾರೆ. ಶಾಸಕರು ಮಂತ್ರಿ ಆಗಬೇಕು, ಮಂತ್ರಿಗಳು ಸಿಎಂ ಆಗಬೇಕು ಅಂತಾರೆ. ಇದು ನ್ಯಾಚುರಲ್, ಎಲ್ಲರೂ ಆಕಾಂಕ್ಷಿಗಳೇ. ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಬೇಕು ಅನ್ನೋದು ಎಲ್ಲಿ ಚರ್ಚೆ ಆಗಿದೆ?. ಜನರ ಕಣ್ಣೀರು ಒರೆಸಲು ರಾಜಕಾರಣಕ್ಕೆ ಬರಬೇಕು .ಈಗಿನ ರಾಜಕಾರಣ ಯಾವ ಮಟ್ಟಕ್ಕೆ ಬಂದಿದೆ ಅಂತ ಹೇಳಿದ್ರೆ ನನ್ನ ಬಾಯಿ ಹೊಲಸು ಆಗುತ್ತೆ" ಎಂದು ಹೇಳಿದರು.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget