ಮಂಗಳೂರು: ಬಜಪೆಯ ಅಂತರರಾಷ್ಟ್ರೀಯ ವಿಮಾಣನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) 500 ಗ್ರಾಂ ಹೈಡೋಪೋನಿಕ್ ಗಾಂಜಾ ವಶಪಡಿಸಿಕೊಂಡಿದ್ದು ಆರೋಪಿಯನ್ನು ಹಾಗೂ ಗಾಂಜಾವನ್ನು ಬಜಪೆ ಠಾಣೆಯ ವಶಕ್ಕೆ ಸೋಮವಾರ ಒಪ್ಪಿಸಿದ್ದಾರೆ.
ಮುಂಬೈನಿಂದ ಇಂಡಿಗೊ ವಿಮಾನದಲ್ಲಿ ಬಂದಿದ್ದ ಶಂಕರ್ ನಾರಾಯಣ ಪೊದ್ದಾರ್ ಆರೋಪಿ. ಆರೋಪಿ ಬಳಿ ಮಾದಕ ಪದಾರ್ಥ ಇರುವ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಆತನ ಬ್ಯಾಗ್ ಅನ್ನು ಸಿಐಎಸ್‌ಎಫ್‌ನ ಅಪರಾಧ ಮತ್ತು ಗುಪ್ತವಾರ್ತೆ ವಿಭಾಗದ (ಸಿಐಡಬ್ಲ್ಯು) ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಆ ಪ್ರಯಾಣಿಕನ ಬ್ಯಾಗ್ ನಲ್ಲಿ, 512 ಗ್ರಾಂ ಹೈಡೋಫೋನಿಕ್ ಗಾಂಜಾ ಪತ್ತೆಯಾಗಿತ್ತು.ಈ ಕುರಿತು ಬೆಂಗಳೂರಿನ ಮಾದಕ ಪದಾರ್ಥ ನಿಯಂತ್ರಣ ಬ್ಯೂರೊಗೆ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳನ್ನು ಬಜಪೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.