ಉತ್ತರ ಕರ್ನಾಟಕದ ಪ್ರಖ್ಯಾತ ರಂಗಭೂಮಿ ಕಲಾವಿದ ಹಾಗೂ ಜನಪ್ರಿಯ ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರು ಇಂದು ಹೃದಯಾಘಾತದಿಂದ ನಿಧನರಾದರು.
ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮ ಮೂಲದ ರಾಜು ತಾಳಿಕೋಟೆ ಅವರು, ದೀರ್ಘಕಾಲದಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ತಮ್ಮ ವಿಶಿಷ್ಟ ಹಾಸ್ಯ ಶೈಲಿಯಿಂದ ಸಾವಿರಾರು ಪ್ರೇಕ್ಷಕರ ಮನ ಗೆದ್ದಿದ್ದರು. ನಂತರ ಚಲನಚಿತ್ರ ಕ್ಷೇತ್ರದಲ್ಲೂ ಪಾದಾರ್ಪಣೆ ಮಾಡಿ ಅನೇಕ ಕನ್ನಡ ಚಿತ್ರಗಳಲ್ಲಿ ಮನರಂಜನೀಯ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು.ನಿನ್ನೆ ಸಂಜೆ ಅವರಿಗೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರ ಪ್ರಯತ್ನಕ್ಕೂ ಸ್ಪಂದಿಸದೇ ಅವರು ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಜು ತಾಳಿಕೋಟೆಯವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗ ಹಾಗೂ ರಂಗಭೂಮಿ ವಲಯದಿಂದ ದುಃಖದ ಅಲೆ ಹರಡಿದೆ. ಹಲವು ನಟರು, ನಿರ್ದೇಶಕರು ಮತ್ತು ರಂಗಸಹೋದ್ಯೋಗಿಗಳು ಸಾಮಾಜಿಕ ಮಾಧ್ಯಮದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.