ಹೊಸದಿಲ್ಲಿ : ಯುಎಇ ಎನ್‌ಎಂಸಿ ಹೆಲ್ತ್‌ಕೇರ್ ಗ್ರೂಪ್ಸಂಸ್ಥಾಪಕ ಬಿ.ಆರ್. ಶೆಟ್ಟಿ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 408.5 ಕೋಟಿ ರೂ.(168.7 ಮಿಲಿಯನ್ ದಿರ್‌ಹಮ್ ಪಾವತಿಸುವಂತೆ ದುಬೈ ಇಂಟರ್‌ನ್ಯಾಷನಲ್ ಫೈನಾನ್ಸಿಯಲ್ ಸೆಂಟರ್ (DIFC) ನ್ಯಾಯಾಲಯ ಆದೇಶಿಸಿದೆ.ಬಿ.ಆರ್. ಶೆಟ್ಟಿ ಅವರು 50 ಮಿಲಿಯನ್ ಡಾಲರ್ ಸಾಲದ ಗ್ಯಾರಂಟಿಗೆ ಸಹಿ ಹಾಕಿರುವ ಬಗ್ಗೆ ನ್ಯಾಯಾಲಯದ ಮುಂದೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಪತ್ತೆ ಹಚ್ಚಿದ ಬಳಿಕ ಡಿಐಎಫ್‌ಸಿ ನ್ಯಾಯಾಲಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 408.5 ಕೋಟಿ ರೂ. ಡಾಲರ್ ಪಾವತಿಸಲು ಆದೇಶಿಸಿದೆ.
ಅಕ್ಟೋಬರ್ 8ರಂದು ಹೊರಡಿಸಿದ ತೀರ್ಪಿನಲ್ಲಿ ನ್ಯಾಯಾಧೀಶ ಆಂಡ್ರ ಮೋರಾನ್ ಅವರು, ಬಿಆರ್ ಶೆಟ್ಟಿ ನೀಡಿರುವ ಸಾಕ್ಷ್ಯವನ್ನು ಅವಿಶ್ವಾಸಾರ್ಹ ಸುಳ್ಳುಗಳ ಸರಮಾಲೆ ಮತ್ತು ಅಸಂಬದ್ಧ ಮತ್ತು ಗೊಂದಲಭರಿತ ಎಂದು ಹೇಳಿದರು.ಬಿ.ಆರ್. ಶೆಟ್ಟಿ ಡಿಸೆಂಬರ್ 2018ರಲ್ಲಿ ಗ್ಯಾರಂಟಿಗೆ ಸಹಿ ಹಾಕಿದ್ದಾರೆ ಎಂದು ಸಾಬೀತುಪಡಿಸುವ ಸಾಕಷ್ಟು ಸಾಕ್ಷಿಗಳು (ಸಾಕ್ಷಿಗಳು ಮತ್ತು ಸಾಕ್ಷದಾರರ ಹೇಳಿಕೆ) ದೊರತಿವೆ ಎಂದು ನ್ಯಾಯಾಲಯ ಹೇಳಿದೆ. ಇದರಿಂದಾಗಿ ಅವರು ಸಾಲಕ್ಕೆ ವೈಯಕ್ತಿಕ ಹೊಣೆಗಾರರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣವು 2018ರ ಡಿಸೆಂಬರ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೀಡಿದ 50 ಮಿಲಿಯನ್ ಡಾಲರ್ ಸಾಲಕ್ಕೆ ಬಿ.ಆರ್. ಶೆಟ್ಟಿ ಅವರು ವೈಯಕ್ತಿಕವಾಗಿ ಸಹಿ ಹಾಕಿರುವುದಕ್ಕೆ ಸಂಬಂಧಿಸಿದೆ.ನಾನು ಬ್ಯಾಂಕಿನ ಸಿಇಒ ಅವರನ್ನು ಭೇಟಿ ಮಾಡಿಲ್ಲ. ಯಾವುದೇ ದಾಖಲೆಗಳಿಗೆ ಸಹಿ ಮಾಡಿಲ್ಲ. ನನ್ನ ಸಹಿಯನ್ನು ನಕಲು ಮಾಡಲಾಗಿದೆ ಎಂದು ಬಿ ಆರ್ ಶೆಟ್ಟಿ ಹೇಳಿದ್ದರು. ಆದರೆ ನ್ಯಾಯಾಲಯಕ್ಕೆ ಪೋಟೊಗಳು, ಇಮೇಲ್ ಸೇರಿದಂತೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಇದು ಶೆಟ್ಟಿ ಅವರ ಹೇಳಿಕೆಗೆ ವಿರುದ್ಧವಾಗಿವೆ.ಬ್ಯಾಂಕಿನ ಆಗಿನ ಸಿಇಒ ಅನಂತ ಶೆಣೈ ಅವರು, “ನಾನು 2018ರ ಡಿಸೆಂಬರ್ 25ರಂದು ಅಬುಧಾಬಿಯ ಎನ್‌ಎಂಸಿ ಕಚೇರಿಗೆ ಹೋಗಿದ್ದೆ. ಅಲ್ಲಿ ಶೆಟ್ಟಿ ಅವರು ನನ್ನ ಎದುರಲ್ಲೇ ಸಹಿ ಹಾಕಿದ್ದಾರೆ” ಎಂದು ಹೇಳಿದ್ದಾರೆ.NMCಯ ಕಚೇರಿಯಲ್ಲಿ ತೆಗೆದ ಪೋಟೊವನ್ನು ಕೂಡ ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದರಲ್ಲಿ ಅವರು ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ಜೊತೆಗಿರುವುದು ಕಂಡು ಬಂದಿತ್ತು.
ಡಿಐಎಫ್‌ಸಿ ನ್ಯಾಯಾಲಯದ ತೀರ್ಪು ಒಂದು ಕಾಲದಲ್ಲಿ ಯುಎಇಯ ಯಶಸ್ವಿ ಭಾರತೀಯ ಉದ್ಯಮಿಗಳಲ್ಲಿ ಒಬ್ಬರೆಂದು ಪ್ರಶಂಸಿಸಲ್ಪಟ್ಟಿದ್ದ ಬಿಆರ್ ಶೆಟ್ಟಿ ಅವರಿಗೆ ದೊಡ್ಡ ಹಿನ್ನೆಡೆಯಾಗಿದೆ. ಶೆಟ್ಟಿ 1975ರಲ್ಲಿ ಎನ್‌ಎಂಸಿ ಹೆಲ್ತ್‌ಕೇರ್ ಅನ್ನು ಸ್ಥಾಪಿಸಿದ್ದರು.