ಚೆನ್ನೈ: ಹಿಂದಿ ಭಾಷೆಯನ್ನು ನಿಷೇಧಿಸುವ ಮಸೂದೆಯನ್ನು ಜಾರಿಗೆ ತರಲು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಮುಂದಾಗಿದ್ದು, ರಾಜಕೀಯವಾಗಿ ಭಾರೀ ಪರ – ವಿರೋಧ ವ್ಯಕ್ತವಾಗುತ್ತಿದೆ.ಮಸೂದೆಯನ್ನು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಲಿದ್ದು, ಈ ಬಿಲ್ ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಚರ್ಚಿಸಲು ಕಾನೂನು ತಜ್ಞರೊಂದಿಗೆ ತುರ್ತು ಸಭೆ ನಡೆದಿದೆ ಎಂದು ವರದಿಯಾಗಿದೆ.ಹಿಂದಿ ಸಿನಿಮಾ, ಹಿಂದಿ ಬೋರ್ಡ್ ಹಾಗೂ ಹಾಡುಗಳನ್ನು ರಾಜ್ಯಾದ್ಯಂತ ಬ್ಯಾನ್ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಬಿಲ್ ನ ಅಧಿವೇಶನದಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಲು ಅವರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಹಿಂದಿ ಬಳಕೆ ಆಗಬಾರದೆನ್ನುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ರಾಜಕೀಯವಾಗಿ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದರೂ ಇದು ಸಂವಿಧಾನವನ್ನು ಅನುಸರಿಸುತ್ತದೆ ಎಂದು ಸರ್ಕಾರದ ವಾದವಾಗಿದೆ.”ನಾವು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ನಾವು ಅದನ್ನು ಪಾಲಿಸುತ್ತೇವೆ. ಹಿಂದಿ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ” ಎಂದು ಮಸೂದೆಯ ಕುರಿತು ಹಿರಿಯ ಡಿಎಂಕೆ ನಾಯಕ ಟಿಕೆಎಸ್ ಎಳಂಗೋವನ್ ಹೇಳಿದ್ದಾರೆ.”ಈ ಮಸೂದೆಯನ್ನು ಜಾರಿಗೆ ತರಲು ಹೋಗಿರುವುದು ಮೂರ್ಖತನ ಮತ್ತು ಅಸಂಬದ್ದ. ಭಾಷೆಯನ್ನು ರಾಜಕೀಯ ಸಾಧನವಾಗಿ ಬಳಸಬಾರದು ಎಂದು ಬಿಜೆಪಿಯ ವಿನೋಜ್ ಸೆಲ್ವಂ ಹೇಳಿದ್ದಾರೆ.ಈ ವರ್ಷದ ಮಾರ್ಚ್‌ನಲ್ಲಿ, ಎಂಕೆ ಸ್ಟಾಲಿನ್ ಸರ್ಕಾರವು 2025-26ರ ರಾಜ್ಯ ಬಜೆಟ್ ಲೋಗೋದಲ್ಲಿ ರಾಷ್ಟ್ರೀಯ ರೂಪಾಯಿ ಚಿಹ್ನೆಯನ್ನು ತಮಿಳು ಅಕ್ಷರ “ರು” ನೊಂದಿಗೆ ಬದಲಾಯಿಸಿತು. ಈ ವಿಚಾರ ಬಿಜೆಪಿ ನಾಯಕರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಟೀಕೆಗೆ ಗುರಿಯಾಗಿತ್ತು. ಆದರೂ ಡಿಎಂಕೆ ಇದನ್ನು ರಾಷ್ಟ್ರೀಯ ಚಿಹ್ನೆಯನ್ನು ತಿರಸ್ಕರಿಸುವ ಬದಲು ತಮಿಳು ಭಾಷೆಯನ್ನು ಉತ್ತೇಜಿಸುವ ಪ್ರಯತ್ನ ಎಂದು ಸಮರ್ಥಿಸಿಕೊಂಡಿತ್ತು.