ಇನ್ಮುಂದೆ ದೆಹಲಿಯಿಂದ ಕಾಶ್ಮೀರದ ಬಾರಮುಲ್ಲಾಗೆ ರೈಲು ಸಂಚಾರ ಸಲೀಸು; ಶೀಘ್ರದಲ್ಲೇ ಪ್ರಧಾನಿಯಿಂದ ಉದ್ಘಾಟನೆ

Picture of Savistara

Savistara

Bureau Report

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೊಸ ರೈಲು ವಿಭಾಗವನ್ನು ಇದೇ ಏಪ್ರಿಲ್ 19ರಂದು ಉದ್ಘಾಟಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಇನ್ನು ಮುಂದೆ ಕಾಶ್ಮೀರದ ರಮಣೀಯ ಕಣಿವೆಗಳಿಗೆ ನಿಮ್ಮ ಪ್ರಯಾಣ ಸುಲಭವಾಗಲಿದೆ. ಏಕೆಂದರೆ, ಅತೀ ಶೀಘ್ರದಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಿಂದ ಜಮ್ಮು ಕಾಶ್ಮೀರದ ಬಾರಾಮುಲ್ಲಾವರೆಗೆ ನೇರ ರೈಲು ಸೇವೆ ಪ್ರಾರಂಭವಾಗಲಿದೆ. ಇಲ್ಲಿಯವರೆಗೆ, ದೆಹಲಿಯಿಂದ ಜಮ್ಮುವಿನ ಕತ್ರಾ ಎಂಬಲ್ಲಿಗೆ ರೈಲಿನ ಮೂಲಕ ಮತ್ತು ನಂತರ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಈಗ ಕತ್ರಾದಿಂದ ಸಂಗಲ್ಡನ್‌ ಎಂಬ ಸ್ಥಳದವರೆಗೆ ರೈಲು ವಿಭಾಗದ ಕಾಮಗಾರಿಗಳು ಪೂರ್ಣಗೊಂಡಿವೆ. ಅಷ್ಟೇ ಅಲ್ಲ,ರೈಲು ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲಾ ಸುರಕ್ಷತಾ ಪರಿಶೀಲನೆಗಳೂ ಮುಗಿದಿವೆ.

ಏಪ್ರಿಲ್ 19ರಂದು ಉದ್ಘಾಟನೆ ಸಾಧ್ಯತೆ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 19ರಂದು ಹೊಸ ರೈಲು ವಿಭಾಗವನ್ನು ಉದ್ಘಾಟಿಸಬಹುದು ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಯೋಜನೆ ಮುಗಿದ ಬಳಿಕ,ಸಾರ್ವಜನಿಕರು ದೆಹಲಿಯಿಂದ ಬಾರಾಮುಲ್ಲಾಗೆ ರೈಲಿನಲ್ಲಿ ಸುಲಭವಾಗಿ ಪ್ರಯಾಣಿಸಲು ಸಾಧ್ಯವಿದೆ. ಆದಾಗ್ಯೂ,ರೈಲು ಸಂಚಾರದ ವೇಳಾಪಟ್ಟಿ ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ) ಅಥವಾ ರೈಲ್ವೆ ಸಚಿವಾಲಯದಿಂದ ಹೊರಬಂದಿಲ್ಲ.ಈ ರೈಲ್ವೆ ಮಾರ್ಗದಲ್ಲಿ ಐತಿಹಾಸಿಕ ಸೇತುವೆಗಳನ್ನು ಕಾಣಬಹುದು. ಅತ್ಯಾಧುನಿಕ ತಂತ್ರಜ್ಞಾನದ ದೃಷ್ಟಿಯಿಂದಲೂ ಇದು ಬಹಳ ವಿಶೇಷವಾಗಿವೆ. ಇಲ್ಲಿ ಚೆನಾಬ್ ಮತ್ತು ಅಂಜಿ ಎಂಬೆರಡು ಪ್ರಮುಖ ಸೇತುವೆಗಳಿವೆ.

ಚೆನಾಬ್ ಸೇತುವೆಯ ಕುರಿತು: ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಇದು. ಚೆನಾಬ್ ನದಿ ಮೇಲೆ 359 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ. ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್‌ಗಿಂತಲೂ 25 ಮೀಟರ್ ಎತ್ತರವಿರುವ ಸೇತುವೆಯನ್ನು 120 ವರ್ಷಗಳ ಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸೇತುವೆ ಗಂಟೆಗೆ 260ಕಿ.ಮೀ ವೇಗದಲ್ಲಿ ಬೀಸುವ ಗಾಳಿಯನ್ನೂ ತಡೆದುಕೊಳ್ಳಬಲ್ಲದು.ಅಂಜಿ ಸೇತುವೆಯ ಕುರಿತು: ಭಾರತದ ಮೊದಲ ಕೇಬಲ್ ಸ್ಟೇ ರೈಲ್ವೆ ಸೇತುವೆ. ಅಂಜಿ ನದಿಯ ಮೇಲೆ ನಿರ್ಮಿಸಲಾಗಿದೆ. 193 ಮೀಟರ್ ಎತ್ತರದ ಸೇತುವೆ 96 ಕೇಬಲ್‌ಗಳ ಸಹಾಯದಿಂದ ನಿಂತಿದೆ. ವಿಶೇಷ ಮೇಲ್ವಿಚಾರಣಾ ವ್ಯವಸ್ಥೆಯನ್ನು ಹೊಂದಿದೆ. ಇದರಿಂದಾಗಿ ಸೇತುವೆ ಭೂಕಂಪ ಮತ್ತು ಭೂಕುಸಿತಗಳಂತಹ ವಿಪತ್ತುಗಳಿಂದಲೂ ಸುರಕ್ಷಿತವಾಗಿ ಉಳಿಯಬಹುದು.ಅನುಕೂಲತೆಗಳು: ಹೊಸ ರೈಲು ಯೋಜನೆ ದೆಹಲಿ ಮತ್ತು ಕಾಶ್ಮೀರದ ನಡುವೆ ನೇರ ರೈಲು ಸಂಪರ್ಕವನ್ನು ಸ್ಥಾಪಿಸುವುದಲ್ಲದೇ, ಪ್ರವಾಸೋದ್ಯಮಕ್ಕೂ ದೊಡ್ಡ ರೀತಿಯಲ್ಲಿ ಉತ್ತೇಜನ ನೀಡಬಲ್ಲದು. ಗುಡ್ಡಗಾಡು ಪ್ರದೇಶಗಳಲ್ಲಿನ ರಸ್ತೆ ಸಾರಿಗೆಯ ಸಮಸ್ಯೆಗಳಿಗೆ ಪರಿಹಾರ ಮಾತ್ರವಲ್ಲ, ಜನರು ಅದ್ಭುತ ರೈಲು ಅನುಭವವನ್ನೂ ಪಡೆಯಲು ಸಾಧ್ಯವಿದೆ.

ಎಲ್ಲಿಂದ, ಎಲ್ಲಿಂದ ಎಷ್ಟು ದೂರ?

  1. ದೆಹಲಿಯಿಂದ ಕತ್ರಾ: 655 ಕಿ.ಮೀ.

2. ಕತ್ರಾದಿಂದ ಸಂಗಲ್ಡನ್: 62 ಕಿ.ಮೀ.

3. ಸಂಗಲ್ದನ್ ನಿಂದ ಬಾರಾಮುಲ್ಲಾ: 184 ಕಿ.ಮೀ

4. ಒಟ್ಟು ದೂರ: ಸುಮಾರು 901 ಕಿ.ಮೀ.ಗಳು.

[t4b-ticker]
error: Content is protected !!