ನವದಹಲಿ: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಸಲ್ಲಿಸಿರುವ ಕುರಿತು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕ ಅಭಿಜಿತ್ ದೀಪೈ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನ್ ಅವರ ರಾಜೀನಾಮೆ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ, ನಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.“ನೀವು ಹೆದರದಿದ್ದರೆ, ಯಾರಿಗೂ ತಲೆಬಾಗದಿದ್ದರೆ. ಯಾರ ರಾಜೀನಾಮೆಯನ್ನಾದರೂ ಪಡೆಯಬಹುದು’ ಎಂದಿರುವ ಅವರು, ದೃಢ ಸಂಕಲ್ಪ ಮಾಡಿ ನಿಂತರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಯ ಸಾಧಿಸಬಹುದು ಎಂಬುದಕ್ಕೆ ಪ್ರಧಾನ್ ರಾಜೀನಾಮೆಯೇ ಸಾಕ್ಷಿ ಎಂದು ಬಣ್ಣಿಸಿದ್ದಾರೆ.’ಇದು ಚಳವಳಿಗೆ ಸಿಕ್ಕ ಗೆಲುವು ಎಂದಿರುವ ಅವರು, ನಮ್ಮ ಇನ್ನೂ ಎರಡು ಬೇಡಿಕೆಗಳಿವೆ’ ಎಂದು ಹೇಳಿದ್ದಾರೆ.
‘ಕಾಕ್ರೋಚ್’ಗಳ ಬೇಡಿಕೆಗಳು
- ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು
- ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಪ್ರಶ್ನೆಪತ್ರಿಕೆ ಸೋರಿಕೆ; ದೇಶದಾದ್ಯಂತ ಪ್ರತಿಭಟನೆ
26ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸುದ್ದಿ ದೇಶದಾದ್ಯಂತ ಭಾರಿ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ), ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿತ್ತು. ಅದರಂತೆ ಮರುಪರೀಕ್ಷೆ ಜೂನ್ 21ರಂದು ನಡೆದಿದೆ. ಆದರೆ, ಮರುಪರೀಕ್ಷೆಯ ಬಳಿಕ ಪ್ರಕಟಿಸಿದ್ದ ಕೀ ಉತ್ತರಗಳಿಗೂ, ಫಲಿತಾಂಶದ ನಂತರ ಬಂದಿರುವ ಅಂಕಗಳಿಗೂ ವ್ಯತ್ಯಾಸವಿದೆ ಎನ್ನಲಾಗುತ್ತಿದೆ.ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಸಿಜೆಪಿ, ಜೂನ್ 20ರಿಂದ ಪ್ರತಿಭಟನೆ ನಡೆಸುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು ಎಂಬುದರ ಜೊತೆಗೆ ಮೂರು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ. ಈ ಪೈಕಿ ಸದ್ಯ ಒಂದು ಈಡೇರಿದೆ. ಇನ್ನೆರಡು ಬಾಕಿಇವೆ.ಸಿಜೆಪಿ ನೇತೃತ್ವದಲ್ಲಿ ದೆಹಲಿಯಲ್ಲಿ ಜುಲೈ 20ರಂದು ನಡೆದ ‘ಸಂಸತ್ ಚಲೊ’ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಅಶ್ರುವಾಯು ಶೆಲ್‌ಗಳನ್ನೂ ಪ್ರಯೋಗಿಸಿದ್ದರು. ನೂರಾರು ವಿದ್ಯಾರ್ಥಿಗಳು ಗಾಯಗೊಂಡು, 80ಕ್ಕೂ ಹೆಚ್ಚು ಪೊಲೀಸರು ಪೆಟ್ಟಾಗಿದೆ ಎಂದು ವರದಿಯಾಗಿತ್ತು.
ವಿವಿಧ ರಾಜಕೀಯ ಪಕ್ಷಗಳೂ ಪ್ರತಿಭಟನೆಗೆ ಧುಮುಕಿವೆ.









































