ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಕಳೆದ ಎರಡು-ಮೂರು ದಿನಗಳಿಂದ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳನ್ನು ಪೊಲೀಸರು ಅಕ್ರಮವಾಗಿ ವಶಕ್ಕೆ ಪಡೆಯುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆರೋಪಿಸಿದೆ.
‘ಎಎನ್‌ಐ’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪಕ್ಷದ ಮುಖ್ಯ ವಕ್ತಾರ ಸೌರವ್ ದಾಸ್, ‘ಜಂತರ್ ಮಂತರ್ ಸುತ್ತಮುತ್ತ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಅಮಾಯಕ ಯುವಕರನ್ನು ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗುತ್ತಿದೆ. ಇದು ಸಂವಿಧಾನಬಾಹಿರ ಕ್ರಮ’ ಎಂದು ಆರೋಪಿಸಿದ್ದಾರೆ.ಕೆಲ ದಿನಗಳ ಹಿಂದೆ ಪ್ರತಿಭಟನಾಕಾರರಿಗೆ 300 ಆಹಾರ ಪೊಟ್ಟಣಗಳನ್ನು ತೆಗೆದುಕೊಂಡು ಬರುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ನಿಜಾಮುದ್ದೀನ್ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಕೀಲರು ಮಧ್ಯಪ್ರವೇಶಿಸಿ ಅವರನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಆಹಾರದ ಪೊಟ್ಟಣಗಳನ್ನು ಹಿಂದೆ ಕೊಡಲಿಲ್ಲ ಎಂದು ದಾಸ್ ಹೇಳಿದ್ದಾರೆ.
ಈ ಬಗ್ಗೆ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಜಂತರ್ ಮಂತರ್ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಬಂಧನಗಳನ್ನು ತಕ್ಷಣ ನಿಲ್ಲಿಸಬೇಕು, ಈಗಾಗಲೇ ವಶಕ್ಕೆ ಪಡೆದಿರುವವರನ್ನು ಬಿಡುಗಡೆ ಮಾಡಬೇಕು, ಭಯದ ವಾತಾವರಣ ಸೃಷ್ಟಿಸುವ ಕ್ರಮಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.
ಪ್ರತಿಭಟನಾಕಾರರ ಪರವಾಗಿ ಹಾಜರಾಗಿದ್ದ ವಕೀಲರನ್ನೂ ಪೊಲೀಸರು ತಳ್ಳಾಡಿಸಿ ಬೆದರಿಕೆ ಹಾಕಿರುವ ದೃಶ್ಯಗಳು ನಮಗೆ ಸಿಕ್ಕಿವೆ ಎಂದ ಅವರು, ‘ಈ ಕ್ರಮಗಳು ಮುಂದುವರಿದರೆ ಜಂತರ್ ಮಂತರ್‌ನಲ್ಲಿರುವ ಪ್ರತಿಭಟನಾಕಾರರು ದೆಹಲಿ ಪೊಲೀಸ್ ಮುಖ್ಯ ಕಚೇರಿವರೆಗೆ ಶಾಂತಿಯುತ ಮೆರವಣಿಗೆ ನಡೆಸಿ ಧರಣಿ ನಡೆಸಲಿದ್ದಾರೆ. ಇದರ ದಿನಾಂಕವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸುತ್ತೇವೆ’ ಎಂದು ಎಚ್ಚರಿಸಿದರು.








































