ಪುತ್ತೂರಿನ ಬೊಳುವಾರು-ಹಾರಾಡಿ ರಸ್ತೆ ಕಾಮಗಾರಿ ವಿಳಂಬ ಹಾಗೂ ಕಳಪೆ ಗುಣಮಟ್ಟದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಇಂದು ಸ್ಥಳ ಪರಿಶೀಲನೆ ನಡೆಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೊಳುವಾರಿನಿಂದ ಹಾರಾಡಿವರೆಗೆ ಕಾಲ್ನಡಿಗೆಯಲ್ಲಿ ತೆರಳಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.
ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿ ಸ್ಥಳೀಯ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದ ಬಿಜೆಪಿ ತಂಡ, ಕಾಮಗಾರಿ ವಿಳಂಬ ಮತ್ತು ಅವ್ಯವಸ್ಥೆಗಳ ಕುರಿತು ಅಹವಾಲುಗಳನ್ನು ಆಲಿಸಿತು.
ಕಾಮಗಾರಿಯಿಂದ ಸುಮಾರು 15 ಮನೆಗಳ ಕುಡಿಯುವ ನೀರಿನ ಸಂಪರ್ಕ ಕಳೆದ ಒಂದು ತಿಂಗಳಿಂದ ಕಡಿತಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದರು. ಅಲ್ಲದೆ, ಕಾಂಕ್ರೀಟ್ ರಸ್ತೆ ಬದಿಯಲ್ಲಿ ಮಣ್ಣು ತುಂಬದೇ ಬಿಟ್ಟಿರುವುದರಿಂದ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳೂ ಕೇಳಿಬಂದವು.ಇದಕ್ಕೆ ಸ್ಪಂದಿಸಿದ ಮಾಜಿ ಶಾಸಕ ಸಂಜೀವ ಮಠಂದೂರು, ಪೌರಾಯುಕ್ತರಿಗೆ ದೂರವಾಣಿ ಮೂಲಕ ಕರೆ ಮಾಡಿ ನೀರಿನ ಸಂಪರ್ಕವನ್ನು ತಕ್ಷಣವೇ ಮರುಸ್ಥಾಪಿಸುವಂತೆ ಒತ್ತಾಯಿಸಿದರು.ಬಳಿಕ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಶ್ ಶೆಟ್ಟಿ ಅವರನ್ನು ಕಾಮಗಾರಿ ನಿಧಾನಗತಿ ಕುರಿತು ತೀವ್ರವಾಗಿ ಪ್ರಶ್ನಿಸಿದ ಮಠಂದೂರು, “ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಪ್ರಸನ್ನ ದರ್ಬೆ, ಲೀಲಾವತಿ ಅಣ್ಣು ನಾಯ್ಕ, ರಾಜೇಶ್ ಬನ್ನೂರು, ಸತೀಶ್ ನಾಯಕ್ ದರ್ಬೆ, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ನಿರಂಜನ್ ಮಾನ್ಯ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.










































