ಗಾಯಗೊಂಡ ವಿದ್ಯಾರ್ಥಿಯನ್ನು ಮಾಧ್ಯಮಗಳ ಮುಂದೆ ಕರೆ ತಂದ ರಾಹುಲ್

Picture of Savistara

Savistara

Bureau Report

ನವದೆಹಲಿ: ಜುಲೈ 20ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆವೇಳೆ ಭದ್ರತಾ ಸಿಬ್ಬಂದಿ ಪೆಲೆಟ್ ಗನ್ ಬಳಸಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪೆಲೆಟ್ ಗನ್ ಪ್ರಯೋಗದಿಂದ ಗಾಯಗೊಂಡ ವಿದ್ಯಾರ್ಥಿಯೊಬ್ಬರನ್ನು ಶುಕ್ರವಾರ ಮಾಧ್ಯಮದ ಮುಂದೆ ಕರೆತಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಮತ್ತು ಲಾಠಿ ಚಾರ್ಜ್ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪಕ್ಕದಲ್ಲಿದ್ದ ಸಾಹಿಲ್ ಎಂಬ ವಿದ್ಯಾರ್ಥಿಯನ್ನು ಪರಿಚಯಿಸಿದರು. ಪ್ರತಿಭಟನೆ ವೇಳೆ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾಗ ಸಾಹಿಲ್ ಅವರ ಮೇಲೆ ಪೆಲೆಟ್ ಗನ್‌ನಿಂದ ಗುಂಡು ಹಾರಿಸಲಾಗಿದೆ ಎಂದು ಅವರು ಆರೋಪಿದ್ದಾರೆ.ಸಾಹಿಲ್ ಅವರ ಕಣ್ಣಿಗೆ ತೀವ್ರ ಗಾಯವಾಗಿದ್ದು, ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿ, ವಿದ್ಯಾರ್ಥಿಯ ಗಾಯಗಳನ್ನು ಮಾಧ್ಯಮದ ಮುಂದೆ ತೋರಿಸಿದರು.

ಸಾಹಿಲ್ ಬರೆದಿದ್ದ ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಪೋಷಕರ ಕನಸಿನ ಮೇಲೆ ಸರ್ಕಾರವೇ ದಾಳಿ ನಡೆಸಿದೆ ಎಂದು ರಾಹುಲ್ ಕಿಡಿ ಕಾರಿದ್ದಾರೆ.’ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾದ ಪ್ರಶ್ನೆಪತ್ರಿಕೆ ಸೋರಿಕೆಗೆ ಭ್ರಷ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೊಣೆ. ಅವರು ಭಾರತದ ಶಿಕ್ಷಣ ವ್ಯವಸ್ಥೆಯ ಕುಸಿತದ ಸಂಕೇತವಾಗಿದ್ದು, ಅವರನ್ನು ವಜಾಗೊಳಿಸಬೇಕು. ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.ಗಾಯಗೊಂಡ ಸಾಹಿಲ್ ಅವರಿಗೆ ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ನಡೆದಿದ್ದು, ಮತ್ತೊಂದು ಬಾಕಿಯಿದೆ. ಅವರಿಗೆ ನ್ಯಾಯ ದೊರಕಬೇಕು ಎಂದು ಹೇಳಿದ್ದಾರೆ.ಇದೇ ವೇಳೆ, ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ತಮ್ಮ ಸಿಬ್ಬಂದಿ ಪೆಲೆಟ್ ಗನ್ ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಸಿಆರ್‌ಪಿಎಫ್‌ನ ರ್ಯಾಪಿಡ್ ಆ್ಯಕ್ಷನ್ ಫೋರ್ಸ್‌ (ಆರ್‌ಎಎಫ್) ಈ ಕುರಿತು ಪ್ರತಿಕ್ರಿಯಿಸಿಲ್ಲ.

[t4b-ticker]
error: Content is protected !!