ಮಳೆ ಕೊರತೆ: ಶಿವನಸಮುದ್ರ, ಶಿಂಷಾದಲ್ಲಿ ಜಲವಿದ್ಯುತ್‌ ಉತ್ಪಾದನೆ ಸ್ಥಗಿತ

Picture of Savistara

Savistara

Bureau Report

ಮಂಡ್ಯ: ಕಾವೇರಿ ಕಣಿವೆಯಲ್ಲಿ ತೀವ್ರ ಮಳೆ ಕೊರತೆಯಿಂದಾಗಿ, ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಶಿವನಸಮುದ್ರ ಮತ್ತು ಶಿಂಷಾ ಕೇಂದ್ರಗಳಲ್ಲಿ ಒಂದೂವರೆ ತಿಂಗಳಿನಿಂದ ಜಲವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ.

ಈ ಬಾರಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟ ಕಾರಣ, ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಸಮೀಪ ಕಾವೇರಿ ನದಿ ಬತ್ತಿದೆ. ಜಲವಿದ್ಯುತ್ ಉತ್ಪಾದನಾ ಘಟಕಗಳಿಗೆ ನೀರಿನ ಅಭಾವ ತಲೆದೋರಿದೆ. ಇದರಿಂದಾಗಿ ಜೂನ್‌ 6ರಿಂದಲೇ ಈ ಘಟಕಗಳು ಕೆಲಸ ಸ್ಥಗಿತಗೊಳಿಸಿವೆ.ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದ ಕಾರಣ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಇದರಿಂದ ಅಣೆಕಟ್ಟೆಯಲ್ಲಿ ಪ್ರಸ್ತುತ 92.38 ಅಡಿ ಮಾತ್ರ ನೀರಿದ್ದು, ಭರ್ತಿಗೆ ಇನ್ನೂ 32 ಅಡಿ ನೀರು ಬರಬೇಕಿದೆ. ಡ್ಯಾಂ ಭರ್ತಿಯಾಗದ ಕಾರಣ ಕಾವೇರಿ ನದಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.

ವಾರ್ಷಿಕ 518 ದಶಲಕ್ಷ ಯುನಿಟ್ ಸಾಮರ್ಥ್ಯ: ಶಿವನಸಮುದ್ರ ಯೋಜನೆಯಲ್ಲಿ ವಿದ್ಯುತ್ ಉತ್ಪಾದಿಸುವ 10 ಘಟಕಗಳಿದ್ದು, ಇವು ವಾರ್ಷಿಕ 367.92 ದಶಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಶಿಂಷಾ ಯೋಜನೆಯಲ್ಲಿ ಎರಡು ಘಟಕಗಳಿದ್ದು, ವಾರ್ಷಿಕವಾಗಿ 150.67 ದಶಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ.

ಪ್ರತಿ ಮೆಗಾವಾಟ್‌ ವಿದ್ಯುತ್ ಉತ್ಪಾದನೆಗೆ 35 ಕ್ಯುಸೆಕ್ ನೀರು ಅವಶ್ಯವಿದೆ. 42 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ನಿತ್ಯ ಸುಮಾರು 1,400 ಕ್ಯುಸೆಕ್ ನೀರು ಬೇಕಾಗುತ್ತದೆ.

ಕಡಿಮೆ ಉತ್ಪಾದನೆ: ಶಿವನಸಮುದ್ರ ಮತ್ತು ಶಿಂಷಾದ ಕೆಲವುಘಟಕಗಳಲ್ಲಿ ದುರಸ್ತಿ ಕಾರ್ಯ ಬಾಕಿ ಇದ್ದ ಕಾರಣ, ಕಳೆದ ಮೂರ್ನಾಲ್ಕು ವರ್ಷಗಳಿಂದ ನಿಗದಿತ ಸಾಮರ್ಥ್ಯದಷ್ಟು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿರಲಿಲ್ಲ.

ಶಿವನಸಮುದ್ರದ ಏಳು ಘಟಕಗಳ ದುರಸ್ತಿ ಈಗ ಬಹುತೇಕ ಪೂರ್ಣಗೊಂಡಿದೆ. ಮೂರು ಘಟಕಗಳ ದುರಸ್ತಿ ಮಾತ್ರ ಬಾಕಿಯಿದೆ. ಉಳಿದ ಘಟಕಗಳ ದುರಸ್ತಿ ಕಾರ್ಯ ನಡೆದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಎಂಜಿನಿಯರ್‌ಗಳು.

ಗಗನಚುಕ್ಕಿ ಭರಚುಕ್ಕಿ ನಿರಾಭರಣ!

ಕಾವೇರಿ ನದಿಯು ಶಿವನಸಮುದ್ರದ ಬಳಿ ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತವನ್ನು ಸೃಷ್ಟಿಸುತ್ತದೆ. ಈ ಬಾರಿ ನೀರಿಲ್ಲದೆ ಜಲಪಾತಗಳೂ ಭಣಗುಡುತ್ತಿವೆ. ಕಾವೇರಿ ನದಿಯ ನೀರನ್ನು ಸುರಂಗ ಮತ್ತು ದೊಡ್ಡ ಕೊಳವೆಗಳ ಮೂಲಕ ವೇಗವಾಗಿ ಹರಿಸಿ ಕೆಳಭಾಗದಲ್ಲಿರುವ ಟರ್ಬೈನ್‌ಗಳ ಮೇಲೆ ರಭಸವಾಗಿ ಬೀಳುವಂತೆ ಮಾಡಲಾಗುತ್ತದೆ. ನೀರಿನ ರಭಸಕ್ಕೆ ಟರ್ಬೈನ್‌ಗಳು ಅತ್ಯಂತ ವೇಗವಾಗಿ ತಿರುಗುತ್ತವೆ. ಜನರೇಟರ್‌ಗೆ ಸಂಪರ್ಕ ಹೊಂದಿರುರುವ ಟರ್ಬೈನ್‌ಗಳು ತಿರುಗಿದಾಗ ಜನರೇಟರ್‌ನಲ್ಲಿರುವ ಕಾಂತೀಯ ಕ್ಷೇತ್ರದಿಂದ ಯಾಂತ್ರಿಕ ಶಕ್ತಿಯು ವಿದ್ಯುತ್‌ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.

.

[t4b-ticker]
error: Content is protected !!