ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಿದೆ.
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಟಿಪ್ಪಣಿ ಆಧರಿಸಿ ಬೆಳ್ತಂಗಡಿಯ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಗೆ ಸದಸ್ಯರನ್ನು ನೇಮಕ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.ಬೆಳ್ತಂಗಡಿ ತಾಲೂಕು ಗೇರುಕಟ್ಟೆ ನಿವಾಸಿ ದಿವಾಕರ ಆಚಾರ್ಯ ಹಾಗೂ ಜನರ್ದಾನ ಪೂಜಾರಿ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.ಅಲ್ಲದೆ, ಜಿಲ್ಲಾ ಧಾರ್ಮಿಕ ಪರಿಷದ್ ಹಾಗೂ ವ್ಯವಸ್ಥಾಪನಾ ಸಮಿತಿಗೆ ನೇಮಕವಾಗಿರುವ ಸದಸ್ಯರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ಶಿಫಾರಸ್ಸು ಪತ್ರದಲ್ಲಿ ಸಲ್ಲಿಸಿದ್ದ ಪಟ್ಟಿಯಲ್ಲಿದ್ದವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಆ ಪ್ರತ್ರದ ಆಧಾರದಂತೆ ಜಿಲ್ಲಾ ಧಾರ್ಮಿಕ ಪರಿಷದ್ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.ಎಂ. ರಾಘವೇಂದ್ರ, ನೀನಾ ಕುಮಾರ್, ಪಿ. ರೀಟಾ, ಮೋಹಿನಿ, ಹೇಮಂತ್ ಕುಮಾರ್, ಶರತ್ ಕುಮಾರ್, ಎಚ್. ರಾಘವ, ಕೆ. ಹರೀಶ್ ಹಾಗೂ ಬಿ. ಹರೀಶ್ ಕುಮಾರ್ ಅವರನ್ನು ವ್ಯವಸ್ಥಾಪನಾ ಸಮಿತಿಗೆ ನೇಮಕ ಮಾಡಲಾಗಿದೆ. ಈ ನೇಮಕಾತಿಯು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ ನೇಮಕಾತಿ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.













































