26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ತಹವ್ವುರ್ ರಾಣಾನನ್ನು ಭಾರತಕ್ಕೆ ಕರೆತರಲಾಗಿದೆ ಎಂದು ಎನ್‌ಐಎ ಅಧಿಕೃತವಾಗಿ ತಿಳಿಸಿದೆ.
ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾನನ್ನು ಅಮೆರಿಕದಿಂದ ಯಶಸ್ವಿಯಾಗಿ ಹಸ್ತಾಂತರಿಸಿದ ನಂತರ ಭಾರತಕ್ಕೆ ಕರೆತರಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ತಿಳಿಸಿದೆ.64 ವರ್ಷದ ಪಾಕಿಸ್ತಾನದ ಸಂಚುಕೋರನನ್ನು ವಿಶೇಷ ವಿಮಾನದಲ್ಲಿ ಅಮೆರಿಕದಿಂದ 17 ತಾಸುಗಳ ಪ್ರಯಾಣದ ಬಳಿಕ ಗುರುವಾರ ಸಂಜೆ ದೆಹಲಿಗೆ ತರಲಾಗಿದೆ. ಉಗ್ರನನ್ನು ಯಾವಾಗ ಮತ್ತು ಹೇಗೆ ಹಸ್ತಾಂತರಿಸಲಾಗುತ್ತದೆ ಎಂಬ ಪ್ರಶ್ನೆಗಳಿಗೆ ಅಂತ್ಯ ಹಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.166 ಜೀವಗಳನ್ನು ಬಲಿ ತೆಗೆದುಕೊಂಡ 2008ರ ಗಲಭೆಯ ಹಿಂದಿನ ಪ್ರಮುಖ ಸಂಚುಕೋರನನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಲು ನಡೆಸಿದ ವರ್ಷಗಳ ನಿರಂತರ ಮತ್ತು ಸಂಘಟಿತ ಪ್ರಯತ್ನಗಳ ನಂತರ ಈಗ ಫಲಿಸಿದೆ ಎಂದು ಎನ್‌ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎನ್‌ಐಎ ಪರ ಹಿರಿಯ ವಕೀಲ ದಯಾನ್ ಕೃಷ್ಣನ್ ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕ ನರೇಂದರ್ ಮಾನ್ ಅವರು ರಾಣಾ ದೆಹಲಿಗೆ ಬಂದಿಳಿದ ನಂತರ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಬಂದರು. ರಾಣಾನನ್ನು ಇದೇ ನ್ಯಾಯಾಲಯದ ಎದುರು ಹಾಜರುಪಡಿಸಲು ಸಿದ್ಧತೆ ನಡೆದಿದ್ದು, ಸುತ್ತಮುತ್ತ ಭದ್ರತೆ ಬಿಗಿ ಭದ್ರತೆ ಹಾಕಲಾಗಿದೆ.
ಪಾಕಿಸ್ತಾನದ ಕಳ್ಳಾಟ ಶುರು: 26/11ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಕರೆತಂದ ಬೆನ್ನಲ್ಲೇ, ಪಾಕಿಸ್ತಾನವು ಆರೋಪಿಯಿಂದ ಅಂತರ ಕಾಯ್ದುಕೊಂಡಿದೆ. ಮುಂಬೈ ದಾಳಿ ಸಂಚುಕೋರ ಕೆನಡಾದ ಪ್ರಜೆ. ಆತ ನಮ್ಮ ದೇಶದ ವ್ಯಕ್ತಿಯಲ್ಲ ಎಂದು ಅದು ಹೇಳಿದೆ.ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಶಫ್ಕತ್ ಅಲಿ ಖಾನ್ ಹೇಳಿಕೆ ಬಿಡುಗಡೆ ಮಾಡಿದ್ದು, ರಾಣಾ ಪಾಕಿಸ್ತಾನದ ಪೌರತ್ವ ಹೊಂದಿದ ನಾಗರಿಕನಲ್ಲ, ಬದಲಿಗೆ ಆತ ಕೆನಡಾ ಪೌರತ್ವವಿದೆ. ಹೀಗಾಗಿ ಆತ ಕೆನಡಾ ವ್ಯಕ್ತಿಯೇ ಹೊರತು, ಪಾಕಿಸ್ತಾನದವನಲ್ಲ ಎಂದಿದ್ದಾರೆ.












































