ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯು ಉಗ್ರರ ವಿರುದ್ಧ ಸಮರ ಸಾರಿದೆ. ಕಳೆದ 48 ಗಂಟೆಗಳಲ್ಲಿ ಆರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಅವಂತಿಪೋರಾ(ಜಮ್ಮು ಮತ್ತು ಕಾಶ್ಮೀರ): “ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಕಳೆದ 48 ಗಂಟೆಗಳಲ್ಲಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಡೆದ ಎರಡು ಸಂಘಟಿತ ಕಾರ್ಯಾಚರಣೆಗಳಲ್ಲಿ 6 ಭಯೋತ್ಪಾದಕರನ್ನು ಹತ್ಯೆ ಮಾಡಿವೆ” ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.ಅವಂತಿಪೋರಾದಲ್ಲಿರುವ ವಿಕ್ಟರ್ ಪ್ರಧಾನ ಕಚೇರಿಯಲ್ಲಿ ಜಿಒಸಿ ವಿಕ್ಟರ್ ಫೋರ್ಸ್ ಮೇಜರ್ ಜನರಲ್ ಧನಂಜಯ್ ಜೋಶಿ ಹಾಗೂ ಐಜಿ ಸಿಆರ್‌ಪಿಎಫ್ ಮತೀಶ್ ಜೈನ್ ಜೊತೆ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಶ್ಮೀರ ಶ್ರೇಣಿಯ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ವಿಧಿ ಕುಮಾರ್ ಬಿರ್ಡಿ, “ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಇದು ಅತ್ಯಂತ ಮಹತ್ವದ ಸಾಧನೆ” ಎಂದರು.
“ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕಳೆದ ಒಂದು ತಿಂಗಳ ಕಾಲ ನಡೆದ ಕಾರ್ಯತಂತ್ರದ ಫಲಿತಾಂಶದ ಫಲವಿದು. 48 ಗಂಟೆಗಳಲ್ಲಿ ಎರಡು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಆರು ಭಯೋತ್ಪಾದಕರು ಹತರಾಗಿದ್ದಾರೆ. ಪಹಲ್ಗಾಮ್ ದಾಳಿಯ ಬಳಿಕ ಭಾರತೀಯ ಸೇನೆಯು ಜಮ್ಮು-ಕಾಶ್ಮೀರದಾದ್ಯಂತ ಉಗ್ರರ ಸರ್ವನಾಶಕ್ಕೆ ಮುಂದಾಗಿದ್ದು, ಶೋಪಿಯಾನ್ ಮತ್ತು ಪುಲ್ವಾಮಾದ ಟ್ರಾಲ್‌ನಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಆರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಈ ಕಾರ್ಯಾಚರಣೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ. ಸಿಆರ್‌ಪಿಎಫ್, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು” ಎಂದು ಬಿರ್ಡಿ ತಿಳಿಸಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದಲ್ಲಿ, ವಿಶೇಷವಾಗಿ ಕಾಶ್ಮೀರ ಕಣಿವೆಯಲ್ಲಿ, ಭಾರತೀಯ ಸೇನೆ ಭಯೋತ್ಪಾದಕ ಚಟುವಟಿಕೆಯನ್ನು ಕೊನೆಗೊಳಿಸಲು ನಿರ್ಧರಿಸಿದೆ. ಪಹಲ್ಗಾಮ್ ದಾಳಿ ಬಳಿಕ ಅನೇಕ ಪ್ರದೇಶಗಳನ್ನು ಕೇಂದ್ರಬಿಂದುವನ್ನಾಗಿ ಮಾಡಿಕೊಳ್ಳಲಾಗಿದೆ. ಉಗ್ರರು ಈಗ ಎತ್ತರದ ಪ್ರದೇಶಗಳಲ್ಲಿ ಅಡಗಿಕೊಂಡಿರುವ ಮಾಹಿತಿ ಲಭ್ಯವಾಗಿದ್ದು, ಈ ಪ್ರದೇಶದಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ವಿಕ್ಟರ್ ಫೋರ್ಸ್‌ನ GOC ಮೇಜರ್ ಜನರಲ್ ಧನಂಜಯ್ ಜೋಶಿ ಹೇಳಿದರು.
“ಮೇ 12ರ ರಾತ್ರಿ, ಶೋಪಿಯಾನ್‌ನ ಕೆಲ್ಲರ್ ಪ್ರದೇಶ ಹಾಗೂ ಪುಲ್ವಾಮಾ ಪ್ರದೇಶದಲ್ಲಿದಲ್ಲಿ ಉಗ್ರರು ಅಡಗಿಕೊಂಡಿರುವ ಮಾಹಿತಿ ಲಭಿಸಿತು. ಹಾಗಾಗಿ ನಿರಂತರ ಕಾರ್ಯಾಚರಣೆಗೆ ಶುರು ಮಾಡಲಾಗಿತ್ತು. ಮೇ 13ರ ಶೋಪಿಯಾನ್ ಭಾಗದಲ್ಲಿ ಬೆಳಗ್ಗೆ ಉಗ್ರರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿತು. ಸೇನೆ ನಡೆಸಿದ ಗುಂಡಿನ ದಾಳಿಗೆ ಭಯೋತ್ಪಾದಕರು ಗುಂಡು ಹಾರಿಸಿದರು. ಕೆಲವು ಗಂಟೆಗಳ ಕಾಲ ಎರಡೂ ಕಡೆ ರಣ ರೋಚಕ ಗುಂಡಿನ ದಾಳಿ ಮುಂದುವರೆಯಿತು. ಅದರಂತೆ ಪುಲ್ವಾಮಾ ಪ್ರದೇಶದಲ್ಲಿನ ಒಂದು ಹಳ್ಳಿಯಲ್ಲಿ ಅಡಗಿರುವ ಭಯೋತ್ಪಾದಕ ಗುಂಪಿನ ಮೇಲೂ ಸೇನೆ ಗುಂಡಿನ ದಾಳಿ ನಡೆಸಿತು. ದಾಳಿಗೂ ಮುನ್ನ ಆ ಗ್ರಾಮದ ನಾಗರಿಕರು, ಮುಗ್ಧ ಮಕ್ಕಳು, ಕುಟುಂಬಗಳು ಮತ್ತು ವೃದ್ಧರನ್ನು ಅಲ್ಲಿಂದ ಸ್ಥಳಾಂತರಿಸಲಾಗಿತ್ತು. ಒಟ್ಟು 48 ಗಂಟೆಯಲ್ಲಿ ಈ ಎರಡು ಪ್ರದೇಶದಲ್ಲಿ ನಡೆದ ಸಂಘಟಿತ ಕಾರ್ಯಾಚರಣೆಗಳಲ್ಲಿ ಆರು ನರಹಂತಕರನ್ನು ಭಾರತೀಯ ಸೇನೆ ಬೇಟೆಯಾಡಿದೆ” ಎಂದು ಧನಂಜಯ್ ಜೋಶಿ ತಿಳಿಸಿದರು.
ಆರು ಉಗ್ರರ ಪೈಕಿ ಶಾಹಿದ್ ಕುಟ್ಟಯ್ ಎಂಬಾತನು ಮೃತಪಟ್ಟಿದ್ದು, ಹೀರ್ಪುರದಲ್ಲಿ ಸರಪಂಚ್‌ನ ಹತ್ಯೆ ಮತ್ತು ಜರ್ಮನ್ ಪ್ರವಾಸಿ ಮೇಲೆ ಇತ್ತೀಚೆಗೆ ನಡೆದ ದಾಳಿಯಲ್ಲಿ ಈತ ಭಾಗಿಯಾಗಿದ್ದ ಎಂದು ಅಧಿಕಾರಿಗಳು ಇದೇ ವೇಳೆ ತಿಳಿಸಿದರು.












































