ವಾರಾಣಸಿ ಪಾಲಿಕೆಯ ಮಹತ್ವದ ನಿರ್ಧಾರ: ಮಾಂಸ, ಮೀನು ಮಳಿಗೆಗಳು ಹೊರವಲಯಕ್ಕೆ ಶಿಫ್ಟ್

Picture of Savistara

Savistara

Bureau Report

ವಾರಾಣಸಿ: ನಗರದ ನಿರ್ವಹಣೆ ಹಾಗೂ ಸ್ವಚ್ಛತೆಯನ್ನುಕಾಪಾಡುವ ನಿಟ್ಟಿನಲ್ಲಿ ವಾರಾಣಸಿ ಪಾಲಿಕೆಯು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ನಗರದ ಮಿತಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾಂಸ ಮತ್ತು ಮೀನು ಮಾರಾಟ ಮಳಿಗೆಗಳನ್ನು ನಿಗದಿಪಡಿಸಲಾದ ಜಾಗಗಳಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಮೈದಾಗಿನ್‌ನಲ್ಲಿರುವ ಟೌನ್ ಹಾಲ್ ಕಟ್ಟಡದಲ್ಲಿ ಶನಿವಾರ ಮೇಯ‌ರ್ ಅಶೋಕ್ ಕುಮಾರ್ ತಿವಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಆಡಳಿತ ಮಂಡಳಿ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.77ನಗರದ ಅಭಿವೃದ್ಧಿಯ ವಿವಿಧ ಆಯಾಮಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಮಾಂಸ ಮತ್ತು ಮೀನು ಮಾರುಕಟ್ಟೆಗಳನ್ನು ವ್ಯವಸ್ಥಿತವಾಗಿ ನಗರದ ಹೊರವಲಯಕ್ಕೆ ಸ್ಥಳಾಂತರಿಸುವ ಯೋಜನೆಗೆ ಸದಸ್ಯರು ಒಮ್ಮತದ ಬೆಂಬಲ ಸೂಚಿಸಿದ್ದಾರೆ ಎಂದು ಅವರು ಹೇಳಿದರು.ಪಾಲಿಕೆ ಕಮಿಷನ‌ರ್ ಹಿಮಾಂಶು ನಾಗ್ದಾಲ್ ಅವರು ಸಭೆಗೆ ಮಾಹಿತಿ ನೀಡಿ, ‘ಯೋಜನೆಯ ಮೊದಲ ಹಂತದಲ್ಲಿ ನಗರದ ಹೊರವಲಯದಲ್ಲಿ 5 ಪ್ರಮುಖ ಸ್ಥಳಗಳನ್ನು ಗುರುತಿಸಲಾಗಿದೆ. ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ತಡೆಯಲು ನಗರದ ಗಡಿ ಭಾಗಗಳಿಗೆ ಹತ್ತಿರವಿರುವ ಜಾಗಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಅಧಿಕಾರಿಗಳ ಮಾಹಿತಿ ಪ್ರಕಾರ, ಸದ್ಯ ನಗರದಲ್ಲಿ ಕಾರ್ಯಾಚರಿಸುತ್ತಿರುವ ಮಾಂಸ ಮತ್ತು ಮೀನು ಮಳಿಗೆಗಳನ್ನು ಮುಂಬರುವ ದಿನಗಳಲ್ಲಿ ರಾಮನಗರ, ಸುಜಾಬಾದ್, ಗಣೇಶ್‌ಪುರ, ಅವಲೇಶ್‌ಪುರ ಮತ್ತು ಶಿವಪುರ ಪ್ರದೇಶಗಳಿಗೆ ಸ್ಥಳಾಂತರಿಸಲಾಗುವುದು. ಈ ಮಾರುಕಟ್ಟೆಗಳ ಕಾರ್ಯನಿರ್ವಹಣೆಯನ್ನು ವ್ಯವಸ್ಥಿತಗೊಳಿಸುವುದು ಹಾಗೂ ಗ್ರಾಹಕರಿಗೆ ನಿರಂತರ ಸೇವೆ ಸಿಗುವಂತೆ ನೋಡಿಕೊಳ್ಳುವುದರ ಜೊತೆಗೆ ನಗರದಲ್ಲಿ ನೈರ್ಮಲ್ಯ ಕಾಪಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

[t4b-ticker]
error: Content is protected !!