ಬೆಂಗಳೂರು: ಹೊಸದಾಗಿ ರಚನೆಯಾಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಚಂದ್ರಗುಪ್ತ ಅವರನ್ನು ರಾಜ್ಯ ಗುಪ್ತಚರ ವಿಭಾಗದ ಮುಖ್ಯಸ್ಥರನ್ನಾಗಿ (ಐಜಿಪಿ) ಆಗಿ ವರ್ಗಾವಣೆ ಮಾಡಲಾಗಿದೆ. ಸದ್ಯ ಅವರು ಭದ್ರತಾ (ಗುಪ್ತಚರ) ವಿಭಾಗದ ಐಜಿಪಿ ಆಗಿದ್ದಾರೆ.ಗುಪ್ತಚರ ವಿಭಾಗದ ಮುಖ್ಯಸ್ಥಲಾಬೂ ರಾಮ್ ಅವರನ್ನು ವರ್ಗಾವಣೆ ಮಾಡಲಾಗಿದೆ.ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಅವರನ್ನು ಸಿಐಡಿ (ವಿಶೇಷ ಘಟಕ ಮತ್ತು ಆರ್ಥಿಕ ಅಪರಾಧಗಳು) ಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಅವರಿಗೆ ಸಿಐಡಿ (ಸೈಬರ್ ಅಪರಾಧಗಳು) ಡಿಜಿಪಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಹೊಸ ಹುದ್ದೆ ಸೃಜನೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ (ಆಡಳಿತ, ಕಂದಾಯ ಮತ್ತು ಐಟಿ) ಮೌನೀಶ್ ಮೌನ್ಸಿಲ್ ಅವರಿಗೆ ಹೊಸದಾಗಿ ಸೃಜಿಸಿರುವ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ (ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಠಾನ) ಹುದ್ದೆಯ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದ (ಎಸಿಎಸ್) ಅಂಜುಂ ಪರ್ವೇಜ್ ಅವರನ್ನು ಅರಣ್ಯ ಇಲಾಖೆ ಎಸಿಎಸ್ ಆಗಿ ವರ್ಗಾಯಿಸಲಾಗಿದೆ.ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಅವರನ್ನು ಸಾರಿಗೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ಬಿ.ಬಿ. ಕಾವೇರಿ, ಸಹಕಾರ ಸಂಘಗಳ ರಿಜಿಸ್ಟ್ರಾರ್ ಆಗಿ ಎಂ.ವಿ. ವೆಂಕಟೇಶ್, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಘಟಕದ ಆಯುಕ್ತರಾಗಿ ಆರ್. ಸೆಲ್ವಮಣಿ ಅವರನ್ನು ವರ್ಗಾವಣೆ ಮಾಡಲಾಗಿದೆ.










































