ಮೈಸೂರು: ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ಪಡೆದಿರುವ ಮೈಸೂರಿನ ಆರ್. ರಘು (ಕೌಟಿಲ್ಯ) ಅವರು ಕಾಯಕ ಸಮುದಾಯದ ಪರ ಹೋರಾಟದಲ್ಲಿ ಗುರುತಿಸಿಕೊಂಡವರು. ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಕಾರ್ಯದರ್ಶಿ, ಪಕ್ಷದ ರಾಜ್ಯ ಸಹ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬಿಜೆಪಿ ರಾಜ್ಯ ಘಟಕದ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿದ್ದಾರೆ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆದ ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನದ ಚುನಾವಣೆಯಲ್ಲಿ ಸತತ ಎರಡು ಬಾರಿ ಬಿಜೆಪಿ ಟಿಕೆಟ್ ಲಭಿಸಿತ್ತು. 2015 ಹಾಗೂ 2021ರ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಪರಾಭವಗೊಂಡಿದ್ದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. 2021ರಲ್ಲಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಬಳಿಕ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ(ಮೈಲ್ಯಾಕ್) ಅಧ್ಯಕ್ಷರಾಗಿದ್ದ ರಘು ಅವರಿಗೆ ರಾಜ್ಯ ಸಚಿವ ಸ್ಥಾನಮಾನವನ್ನೂ ನೀಡಲಾಗಿತ್ತು.ಶಿಕ್ಷಣ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಅವರು, ಮೈಸೂರಿನಲ್ಲಿ ಕೌಟಿಲ್ಯ ವಿದ್ಯಾಲಯ ಎಂಬ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದರು. ನಂತರ, ಅದನ್ನು ಮಾರಿದರು. ಈಗ ‘ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್’ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ದಟ್ಟಗಳ್ಳಿಯಲ್ಲಿ ಸಿಬಿಎಸ್ಇ ಕ್ಯಾಂಪಸ್ ಹಾಗೂ ಆರ್.ಟಿ. ನಗರದ ಐಸಿಎಸ್ಇ ಕ್ಯಾಂಪಸ್ ಇದೆ.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡುತ್ತಿರುವ ಅವರು, ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ನಿರೂಪಣೆ ಮತ್ತು ಪರಿಕಲ್ಪನೆಯಲ್ಲಿ ಮೂಡಿಬಂದಿರುವ, ಬಿ.ಎಸ್. ಯಡಿಯೂರಪ್ಪ ಅವರ ಬದುಕಿನ ಮೈಲುಗಲ್ಲುಗಳನ್ನು ಸಾರುವ ‘ಕೆಂದಾವರೆ-ಕಮಲ ಅರಳಿದ ಕಥೆ’ ಹಾಗೂ ಅವರ ಸುದೀರ್ಘ ಶಾಸಕತ್ವದ ಅವಧಿಯಲ್ಲಿ ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹ ಒಳಗೊಂಡ ‘ಸದನ ಶಿಕಾರಿ-ಯಡಿಯೂರಪ್ಪನವರ ಗುಡುಗಿನ ನುಡಿಗಳು’ ಕೃತಿಗಳನ್ನು ಈಚೆಗೆ ಚಿತ್ರದುರ್ಗದಲ್ಲಿ ನಡೆದ ‘ಬಿಎಸ್ವೈ ಅಭಿಮಾನೋತ್ಸವ’ದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಡುಗಡೆ ಮಾಡಿದ್ದಾರೆ.










































