ಉಡುಪಿ: ಫೇಸ್‌ಬುಕ್‌ನಲ್ಲಿ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಕೇರ್ವಾಶೆ ನಲ್ಕೆದಬೆಟ್ಟು ನಿವಾಸಿ ಸುಧೀರ ಬಂಗೇರ(48) ಬಂಧಿತ ಆರೋಪಿ. “ನಮ್ಮ ಕಾರ್ಲ’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಪೋಟೊ ಹಾಕಿ ಅದರಲ್ಲಿ “ಆರ್‌ಎಸ್‌ಎಸ್ ಇನ್ನು ಎರಡು ವರ್ಷಗಳ ಅವಧಿ ಕೋಮು ವಾದವನ್ನು ಉಸಿರಾಡುವುದಿಲ್ಲ. ಕಾರಣ ಗೃಹಮಂತ್ರಿ ಸ್ಥಾನದಲ್ಲಿ ಸೌಮ್ಯ ಸ್ವಭಾವದ ಸಚಿವರಿಲ್ಲ’ ಎಂಬ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಫೋಸ್ಟ್ ಮಾಡಲಾಗಿತ್ತು.ಆ ಪೋಸ್ಟ್‌ಗೆ ಸುಧೀರ್ ಬಂಗೇರ ಅವಹೇಳನಕಾರಿಯಾಗಿ ಕಮೆಂಟ್ ಹಾಕಿರುವುದಾಗಿ ದೂರಲಾಗಿದೆ.ಸುಧೀರ ಬಂಗೇರ ಸಾಮಾಜಿಕ ಮಾಧ್ಯಮದಲ್ಲಿ ಸಾಮಾಜಿಕ ಶಾಂತಿ ಮತ್ತು ಸಾಮರಸ್ಯಕ್ಕೆ ಹಾನಿ ಮಾಡುವ ಚಟುವಟಿಕೆಯಲ್ಲಿ ತೊಡಗಿ ದಲಿತ ಸಚಿವರಿಗೆ ಜಾತಿ ನಿಂದನೆ ಮಾಡಿರುವುದಾಗಿ ಕಾರ್ಕಳದ ನಿಟ್ಟೆ ಅತ್ತೂರಿನ ಸುರೇಶ ಚೇತನಹಳ್ಳಿ ಎಂಬುವವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.










































