ಪಾಕಿಸ್ತಾನದ ಮುಖವಾಡ ಕಳಚಲು ಉತ್ಸುಕನಾಗಿದ್ದೇನೆ: ಸಂಸದ ಕ್ಯಾ.ಬ್ರಿಜೇಶ್ ಚೌಟ

Picture of Savistara

Savistara

Bureau Report

ಭಯೋತ್ಪಾದನೆ ವಿರುದ್ದದ ಸಂಸದರ ನಿಯೋಗದಲ್ಲಿ ತೇಜಸ್ವಿ ಸೂರ್ಯ, ಕ್ಯಾ| ಚೌಟ, ಸರ್ವಪಕ್ಷ ನಿಯೋಗದ ಭೇಟಿಯು ರಾಜತಾಂತ್ರಿಕ ಪ್ರಯತ್ನದ ಭಾಗ: ತೇಜಸ್ವಿ ಸೂರ್ಯ

ಬೆಂಗಳೂರು/ಮಂಗಳೂರು: ಪಹಲ್ಲಾಮ್ ಉಗ್ರ ದಾಳಿಯಬಳಿಕ ಭಾರತ ಕೈಗೊಂಡ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಕಪಟ ಮುಖವನ್ನು ಜಗತ್ತಿಗೆ ಅನಾವರಣಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಅಭಿಪ್ರಾಯ ರೂಪಿಸುವ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಯೋತ್ಪಾದನೆ ಬಗ್ಗೆ ಭಾರತದ ರಾಜತಾಂತ್ರಿಕ ನಿಲುವು ವ್ಯಕ್ತಪಡಿಸಲು ಕೇಂದ್ರ ಸರಕಾರ ರಚಿಸಿರುವ ಸಂಸದರ ನಿಯೋಗದಲ್ಲಿ ಕನ್ನಡಿಗರಾದ ತೇಜಸ್ವಿ ಸೂರ್ಯ ಹಾಗೂ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಅವಕಾಶ ಸಿಕ್ಕಿದೆ.ಡಾ.ಶಶಿ ತರೂ‌ರ್ ನೇತೃತ್ವದ ನಿಯೋಗದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇದ್ದು, ಈ ತಂಡವು ಅಮೆರಿಕ, ಪನಾಮ, ಗಯಾನಾ, ಬ್ರೆಜಿಲ್, ಕೊಲೊಂಬಿಯ ದೇಶಗಳಿಗೆ ಭೇಟಿ ಕೊಡಲಿದೆ. ಕನಿಮೊಳಿ ಕರುಣಾನಿಧಿ ನೇತೃತ್ವದ ತಂಡವು ಸ್ಪೇನ್, ಗ್ರೀಸ್, ಸ್ಟೋವೇನಿಯ, ರಷ್ಯಾ ದೇಶಗಳಿಗೆ ಭೇಟಿ ನೀಡಲಿದ್ದು, ಈ ನಿಯೋಗದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಇರಲಿದ್ದಾರೆ.

ಈ ನಿಯೋಗಗಳು ಮೇ 23ರಿಂದ ಜೂ. 6ರ ವರೆಗೆ ವಿಶ್ವ ಪರ್ಯಟನೆ ಮಾಡಲಿದೆ. ಭಯೋತ್ಪಾದನೆ ವಿರುದ್ಧ ಜಾಗತಿಕ ಅಭಿಪ್ರಾಯವನ್ನು ರೂಪಿಸುವ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಯೋತ್ಪಾದನೆ ಬಗ್ಗೆ ಭಾರತದ ರಾಜತಾಂತ್ರಿಕ ನಿಲುವು ವ್ಯಕ್ತಪಡಿಸಲು ಪ್ರಧಾನಿ ಮೋದಿ ನೇತೃತ್ವದ ಸರಕಾರ ಈ ಜಾಗತಿಕ ಸಂವಹನ ಕಾರ್ಯ ಆರಂಭಿಸಿದೆ.

ಮುಖವಾಡ ಬಯಲು ಮಾಡುವ ಕಾಲ:

ಈ ಕುರಿತು ಸಂಸದ ಕ್ಯಾ| ಚೌಟ ಅವರು ಪ್ರತಿಕ್ರಿಯಿಸಿ, ನಿಯೋಗದಲ್ಲಿ ಸ್ಥಾನ ಪಡೆದು ಭಾರತವನ್ನು ವಿಶ್ವವೇದಿಕೆಯಲ್ಲಿ ಪ್ರತಿನಿಧಿಸಲು ಓರ್ವ ಮಾಜಿ ಸೈನಿಕನಾಗಿ, ಸಂಸದನಾಗಿ ತುಂಬಾ ಹೆಮ್ಮೆ ಮತ್ತು ಸಂತಸವಾಗುತ್ತಿದೆ. ಪಾಕಿಸ್ತಾನದ ಮುಖವಾಡವನ್ನು ಜಗತ್ತಿನ ಮುಂದೆ ತೋರಿಸಲು ಉತ್ಸುಕನಾಗಿದ್ದೇನೆ. ಪಹಲ್ಲಾಮ್‌ನಲ್ಲಿ ಭಾರತೀಯರನ್ನು ಧರ್ಮದ ಆಧಾರದಲ್ಲಿ ಕೊಲೆ ಮಾಡಲಾಗಿತ್ತು. ಅದಕ್ಕೆ ಪ್ರತೀಕಾರವಾಗಿ ನಮ್ಮ ಸೈನಿಕರು ಸಿಂದೂರ ಕಾರ್ಯಾಚರಣೆಯಲ್ಲಿ ಸಾಹಸ, ಪರಾಕ್ರಮ, ವಿಶೇಷವಾಗಿ ವೃತ್ತಿ ಪರತೆ ಮೆರೆದಿದ್ದಾರೆ. ಜವಾಬ್ದಾರಿಯುತ ನಡೆಯಿಂದ ಹೆಮ್ಮೆ ತಂದಿದ್ದಾರೆ.ಪಾಕಿಸ್ಥಾನ ಉಗ್ರ ವಾದವನ್ನು ಪೋಷಿಸಿಕೊಂಡು ಬಂದಿದೆ. ಮೋದಿಯವರ ನೇತೃತ್ವದ ಹೊಸ ಭಾರತದ ಶಕ್ತಿ ಏನು, ಉಗ್ರವಾದದ ವಿರುದ್ಧ ಹೇಗೆ ಎದೆಯೊಡ್ಡಿ ನಿಲ್ಲುತ್ತದೆ ಎಂಬುದನ್ನು ಜಗತ್ತಿಗೆ ತಿಳಿಸಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಮೇ 20ರಂದು ಹೊಸದಿಲ್ಲಿಗೆ

ಐವರು ಸಂಸದರು ಮತ್ತು ಮೂವರು ರಾಜತಾಂತ್ರಿಕರು ಇರುವ 8 ಮಂದಿಯ ತಂಡದಲ್ಲಿ ನಾನು ಕೂಡ ಓರ್ವ. ಡಿಎಂಕೆಯ ಕನಿಮೋಳಿ ಅವರ ನೇತೃತ್ವದಲ್ಲಿ ಸ್ಪೇನ್, ಗ್ರೀಸ್, ಪ್ಲೊವೇನಿಯಾ, ರಷ್ಯಾ ದೇಶಗಳಿಗೆ 10 ದಿನಗಳ ಕಾಲ ಪ್ರವಾಸ ಮಾಡಲಿದ್ದೇವೆ. ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಷ್ಯಾ ದೇಶಕ್ಕೂ ಭೇಟಿ ನೀಡುತ್ತಿರುವುದು ಮಹತ್ವದ್ದು. ಮೇ 20ರಂದು ಹೊಸದಿಲ್ಲಿಗೆ ಬರುವಂತೆ ಸೂಚನೆ ಬಂದಿದೆ. ಅಲ್ಲಿಗೆ ತೆರಳಿದ ಬಳಿಕ ವಿದೇಶಾಂಗ ಇಲಾಖೆಯಿಂದ ಪೂರಕ ಮಾಹಿತಿ ಲಭಿಸಲಿದೆ ಎಂದು ಕ್ಯಾ | ಚೌಟ ತಿಳಿಸಿದ್ದಾರೆ.

ಅತ್ಯಂತ ಔಚಿತ್ಯ ಪೂರ್ಣ

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವ ವೇದಿಕೆಯಲ್ಲಿ ಬಹಿರಂಗಪಡಿಸಲು ಕೇಂದ್ರ ಸರಕಾರ ಅಂತಿಮಗೊಳಿಸಿದ ಸರ್ವ ಪಕ್ಷಗಳ ನಿಯೋಗಕ್ಕೆ ದ.ಕ.ದ ಸಂಸದ, ಸೇನೆಯಲ್ಲಿದ್ದು ದೇಶ ಸೇವೆ ಮಾಡಿರುವ ಕ್ಯಾ | ಬ್ರಿಜೇಶ್ ಚೌಟ ಅವರು ಆಯ್ಕೆಯಾಗಿರುವುದು ಅತ್ಯಂತ ಔಚಿತ್ಯ ಪೂರ್ಣವಾಗಿದೆ. ಅವರು ಪಾಕಿಸ್ಥಾನದ ಮುಖವಾಡವನ್ನು ಯಶಸ್ವಿಯಾಗಿ ವಿದೇಶಗಳ ಮುಂದೆ ತೆರೆದಿಡಲಿದ್ದಾರೆ.

ಸತೀಶ್‌ ಕುಂಪಲ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ

ಭಾರತದ ದೃಢ, ಏಕೀಕೃತ ನಿಲುವು ವಿವರಿಸುವೆವು:ತೇಜಸ್ವಿ ಸೂರ್ಯ

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಪ್ರಧಾನಿ ನರೇಂದ್ರ ಮೋದಿ ಸರಕಾರವು 32 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಭೇಟಿ ನೀಡಲು ಏಳು ಸರ್ವಪಕ್ಷ ನಿಯೋಗಗಳನ್ನು ರಚಿಸಿದ್ದು, ಈ ಭೇಟಿಯು ಪ್ರಮುಖ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿದೆ. ಪ್ರತಿ ತಂಡವು ನೀತಿ ಮತ್ತು ರಾಜತಾಂತ್ರಿಕ ಪರಿಣತಿಯನ್ನು ಹೊಂದಿರುವ ಸಂಸದರಿಗೆ ಬೆಂಬಲ ನೀಡಲು ನಿವೃತ್ತ ರಾಜತಾಂತ್ರಿಕರನ್ನು ಕೂಡ ಒಳಗೊಂಡಿದೆ. ಈ ನಿಯೋಗಗಳು ಭಯೋತ್ಪಾದನೆ ಕುರಿತು ಭಾರತದ ದೃಢ ಮತ್ತು ಏಕೀಕೃತ ನಿಲುವನ್ನು ವಿವರಿಸುವ ಮತ್ತು ಗಡಿಯಾಚೆಗಿನ ದಾಳಿಗಳಿಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಪುನರುಚ್ಚರಿಸುವ ಗುರಿ ಹೊಂದಿವೆ.

ಅಮೆರಿಕಕ್ಕೆ ತೆರಳಲಿರುವ ಭಾರತೀಯ ನಿಯೋಗದಲ್ಲಿ ಡಾ| ಶಶಿ ತರೂ‌ರ್ ಅವರೊಂದಿಗೆ ನಾನೂ ಭಾಗವಹಿಸಲಿದ್ದು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಭಾರತದ ಸಂದೇಶವನ್ನು ಜಗತ್ತಿಗೆ ಕೊಂಡೊಯ್ಯುವ ಮತ್ತು ಆಪರೇಶನ್ ಸಿಂದೂರ ಯಶಸ್ವಿ ಕಾರ್ಯಾಚರಣೆಯ ಮಹತ್ವದ ಕುರಿತಾಗಿ ಭಾರತದ ನಿಲುವನ್ನು ವ್ಯಕ್ತಪಡಿಸಲು ಈ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದ ತಿಳಿಸುತ್ತೇನೆ.

ತೇಜಸ್ವಿ ಸೂರ್ಯ, ಬಿಜೆಪಿ ಸಂಸದ

[t4b-ticker]
error: Content is protected !!