ನವದೆಹಲಿ: ಮಧ್ಯಪ್ರಾಚ್ಯದ ಹೊರ್ಮುಜ್ ಜಲಸಂಧಿಯಲ್ಲಿಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವತಿಯಿಂದ ಎರಡು ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ, ಭಾರತೀಯ ನೌಕಾಪಡೆಯು ಈ ಭಾಗದಲ್ಲಿ ಬಿಗಿ ಭದ್ರತೆ ಕೈಗೊಂಡಿದೆ. ಪರ್ಷಿಯನ್ ಕೊಲ್ಲಿಯಲ್ಲಿ ಸಂಚರಿಸುವ ಭಾರತೀಯ ಧ್ವಜ ಹೊಂದಿರುವ ಎಲ್ಲಾ ಹಡಗುಗಳಿಗೆ ಕೇಂದ್ರ ಸರ್ಕಾರವು ಹೊಸ ಮಾರ್ಗಸೂಚಿಯನ್ನು (Advisory) ಬಿಡುಗಡೆ ಮಾಡಿದೆ.
ಲಾರಕ್ ದ್ವೀಪದಿಂದ ದೂರವಿರಲು ಸೂಚನೆ
ಏಪ್ರಿಲ್ 18 ರಂದು ಭಾರತದ ‘ಜಗ್ ಅರ್ನವ್’ ಮತ್ತು ‘ಸನ್ಮಾರ್ ಹೆರಾಲ್ಡ್’ ಎಂಬ ಎರಡು ಹಡಗುಗಳು ಹೊರ್ಮುಜ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಇರಾನ್ ಪಡೆಗಳು ಗುಂಡಿನ ದಾಳಿ ನಡೆಸಿದ್ದವು. ಇದರಿಂದಾಗಿ ಈ ಹಡಗುಗಳು ಅರ್ಧದಲ್ಲೇ ವಾಪಸ್ ಬರಬೇಕಾಯಿತು. ಈ ಘಟನೆಯ ನಂತರ, ಭಾರತೀಯ ಹಡಗುಗಳು ಲಾರಕ್ ದ್ವೀಪದ ಹತ್ತಿರ ಸುಳಿಯಬಾರದು ಮತ್ತು ನೌಕಾಪಡೆಯ ಸೂಚನೆ ಸಿಕ್ಕ ನಂತರವೇ ಸಂಚರಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಏನಿದು ಲಾರಕ್ ದ್ವೀಪದ ಆತಂಕ?
ಲಾರಕ್ ದ್ವೀಪವು ಹೊರ್ಮುಜ್ ಜಲಸಂಧಿಯ ಅತ್ಯಂತ ಕಿರಿದಾದ ಭಾಗದಲ್ಲಿದೆ. ಇಲ್ಲಿ ಇರಾನ್ ಪ್ರಮುಖ ತೈಲ ಮೂಲಸೌಕರ್ಯಗಳು ಹಾಗೂ ಸೇನಾ ನೆಲೆಗಳಿವೆ. ಈ ದ್ವೀಪದ ಸುತ್ತಮುತ್ತಲಿನ ಸಮುದ್ರದಲ್ಲಿ ಇರಾನ್ ತೀವ್ರ ನಿಗಾ ವಹಿಸಿದ್ದು, ಸಣ್ಣ ಮತ್ತು ವೇಗದ ದೋಣಿಗಳ ಮೂಲಕ ಹಡಗುಗಳನ್ನು ಗುರಿಪಡಿಸುವ ಸಾಧ್ಯತೆ ಇರುತ್ತದೆ. ಮೊದಲು ಒಮಾನ್ ಕರಾವಳಿಯ ಮಾರ್ಗವನ್ನು ಬಳಸಲಾಗುತ್ತಿತ್ತು, ಆದರೆ ಅಲ್ಲಿ ಮೈನ್‌ಗಳ (ಸುರಂಗ ಸ್ಫೋಟಕ) ಭೀತಿ ಇರುವುದರಿಂದ ಈಗ ಆ ಮಾರ್ಗವನ್ನು ಕೈಬಿಡಲಾಗಿದೆ.
ಭಾರತೀಯ ನೌಕಾಪಡೆಯಿಂದ ರಕ್ಷಣೆ
ಪ್ರಸ್ತುತ 14 ಭಾರತೀಯ ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿದ್ದು, ಹೊರ್ಮುಜ್ ಜಲಸಂಧಿಯನ್ನು ದಾಟಲು ನೌಕಾಪಡೆಯ ಹಸಿರು ನಿಶಾನೆಗಾಗಿ ಕಾಯುತ್ತಿವೆ. ಈಗಾಗಲೇ 11 ಹಡಗುಗಳು ಯಶಸ್ವಿಯಾಗಿ ಜಲಸಂಧಿಯನ್ನು ದಾಟಿವೆ. ಕೊನೆಯದಾಗಿ ದಾಟಿದ ‘ದೇಶ್ ಗರಿಮಾ’ ಎಂಬ ಟ್ಯಾಂಕರ್ ಹಡಗಿಗೆ ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ಬೆಂಗಾವಲು ನೀಡುತ್ತಿದೆ. ಈ ಹಡಗು ಏಪ್ರಿಲ್ 22 ರಂದು ಮುಂಬೈ ತಲುಪುವ ನಿರೀಕ್ಷೆಯಿದೆ.ಭಾರತೀಯ ನೌಕಾಪಡೆಯು ಒಟ್ಟು ಏಳು ಯುದ್ಧನೌಕೆಗಳನ್ನು ಈ ಭಾಗದಲ್ಲಿ ನಿಯೋಜಿಸಿದ್ದು, ಜಲಸಂಧಿ ದಾಟಿದ ನಂತರ ಹಡಗುಗಳಿಗೆ ಸುರಕ್ಷಿತವಾಗಿ ಬೆಂಗಾವಲು ನೀಡಿ ಭಾರತಕ್ಕೆ ಕರೆತರುತ್ತಿವೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ನೌಕಾಪಡೆಯು ಪ್ರತಿ ಕ್ಷಣವೂ ಹಡಗುಗಳೊಂದಿಗೆ ಸಂಪರ್ಕದಲ್ಲಿದೆ.












































