ಲಾಸ ವೇಗಾಸ್ (ಅಮೆರಿಕ): ಜಗತ್ತಿನಾದ್ಯಂತ ಕೋಟ್ಯಂತರಅಭಿಮಾನಿಗಳನ್ನು ಹೊಂದಿರುವ ಡಬ್ಲ್ಯೂಡಬ್ಲ್ಯೂಇ (WWE) ‘ದಿ ಬೀಸ್ಟ್’ ಖ್ಯಾತಿಯ ಬ್ರಾಕ್ ಲೆಸ್ನರ್ ಅವರ ಸುದೀರ್ಘ ವೃತ್ತಿಜೀವನ ಅಂತ್ಯಗೊಂಡಿದೆಯೇ? ಭಾನುವಾರ ನಡೆದ ‘ರೆಸಲ್‌ಮೇನಿಯಾ 42’ರ ಪಂದ್ಯದ ನಂತರ ಅವರು ತೋರಿದ ಭಾವನಾತ್ಮಕ ನಡೆಗಳು ಈಗ ಇಂತಹದೊಂದು ದೊಡ್ಡ ಚರ್ಚೆಗೆ ಕಾರಣವಾಗಿವೆ.ಉದಯೋನ್ಮುಖ ತಾರೆ ಓಬಾ ಫೆಮಿ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ನಂತರ ಲೆಸ್ನರ್ ತೋರಿದ ಭಾವನಾತ್ಮಕ ನಡವಳಿಕೆಗಳು ಅವರ ನಿವೃತ್ತಿಯ ಸುದ್ದಿಗೆ ಭದ್ರ ಬುನಾದಿ ಹಾಕಿವೆ.
ರಿಂಗ್‌ನಲ್ಲೇ ಶೂ, ಗೌಸ್ ಬಿಟ್ಟು ಬಂದ ಲೆಸ್ನರ್
ಸಾಮಾನ್ಯವಾಗಿ ಅಖಾಡದಲ್ಲಿ ಅತ್ಯಂತ ಕ್ರೂರ ಮತ್ತು ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುವ ಲೆಸ್ನರ್, ಈ ಬಾರಿ ವಿಭಿನ್ನವಾಗಿ ಕಂಡರು. ಪಂದ್ಯ ಮುಗಿದ ಬಳಿಕ ರಿಂಗ್‌ನಲ್ಲೇ ಕುಳಿತ ಅವರು, ತಮ್ಮ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿದ್ದ ಕುಸ್ತಿ ಗೌಸ್ ಮತ್ತು ಶೂಗಳನ್ನು ಬಿಚ್ಚಿ ರಿಂಗ್‌ನ ಮಧ್ಯಭಾಗದಲ್ಲಿ ಇರಿಸಿದರು. ಕ್ರೀಡಾ ಲೋಕದಲ್ಲಿ ಕ್ರೀಡಾಪಟುಗಳು ತಮ್ಮ ಪರಿಕರಗಳನ್ನು ಅಖಾಡದಲ್ಲೇ ಬಿಟ್ಟು ಬರುವುದು ‘ವೃತ್ತಿಜೀವನದ ಅಂತ್ಯ’ದ ಸಂಕೇತವೆಂದು ಪರಿಗಣಿಸಲಾಗುತ್ತದೆ.ಇದಾದ ನಂತರ ರಿಂಗ್‌ನ ನೆಲಕ್ಕೆ ಮುತ್ತಿಟ್ಟ ಲೆಸ್ನರ್, ತಮ್ಮ ದೀರ್ಘಕಾಲದ ಮಾರ್ಗದರ್ಶಕ ಪಾಲ್ ಹೈಮನ್ ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟರು.
ಯುವ ಪ್ರತಿಭೆಗೆ ‘ಪಾಸಿಂಗ್ ದಿ ಟಾರ್ಚ್’
ಕೇವಲ ಐದು ನಿಮಿಷಗಳ ಕಾಲ ನಡೆದ ಈ ಹೈ-ವೋಲ್ವೇಜ್ ಪಂದ್ಯದಲ್ಲಿ ಓಬಾ ಫೆಮಿ ಅವರು ಲೆಸ್ನರ್ ಅವರ ಪ್ರಬಲ ‘F5’ ದಾಳಿಯನ್ನು ಮೆಟ್ಟಿ ನಿಂತು ಜಯಗಳಿಸಿದರು. ಲೆಸ್ನರ್ ಅವರಂತಹ ದಿಗ್ಗಜ ಆಟಗಾರನನ್ನು ಇಷ್ಟು ಸುಲಭವಾಗಿ ಸೋಲಿಸಿರುವುದು ರೆಸಲಿಂಗ್ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಇದು ಹಳೆಯ ತಲೆಮಾರಿನ ಆಟಗಾರರು ಹೊಸ ತಲೆಮಾರಿನವರಿಗೆ ದಾರಿ ಮಾಡಿಕೊಡುವ ‘ಪಾಸಿಂಗ್ ದಿ ಟಾರ್ಚ್’ (Passing the Torch) ಕ್ಷಣವೆಂದು ವಿಶ್ಲೇಷಿಸಲಾಗುತ್ತಿದೆ.
ಲೆಸ್ನರ್ ಸಾಧನೆಯ ಹಾದಿ
–2002 ರಲ್ಲಿ ಪದಾರ್ಪಣೆ: ಅತಿ ಕಿರಿಯ ವಯಸ್ಸಿನ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಎಂಬ ಹೆಗ್ಗಳಿಕೆ.
-2014ರಲ್ಲಿ ದಿ ಅಂಡರ್‌ಟೇಕರ್ ಅವರ ರೆಸಲ್‌ಮೇನಿಯಾ ಗೆಲುವಿನ ಸರಪಳಿಯನ್ನು ಮುರಿದ ಮೊದಲ ವೀರ.
-ಡಬ್ಲ್ಯೂಡಬ್ಲ್ಯೂಇ ಮಾತ್ರವಲ್ಲದೆ ಯುಎಫ್‌ಸಿ (UFC) ಹೆವಿವೇಯ್ಡ್ ಚಾಂಪಿಯನ್ ಕೂಡ ಆಗಿದ್ದರು.
ಡಬ್ಲ್ಯೂಡಬ್ಲ್ಯೂಇ ಸಂಸ್ಥೆಯು ಅಧಿಕೃತವಾಗಿ ಲೆಸ್ನರ್ ನಿವೃತ್ತಿಯನ್ನು ಇನ್ನು ಘೋಷಿಸಿಲ್ಲವಾದರೂ, ಕಾಮೆಂಟೇಟರ್ ಮೈಕೆಲ್ ಕೋಲ್ ಅವರ ಮಾತುಗಳು ಇದು ಲೆಸ್ನರ್ ಅವರ ಕಟ್ಟಕಡೆಯ ಪಂದ್ಯವಿರಬಹುದು ಎಂಬ ಅನುಮಾನವನ್ನು ಪುಷ್ಟಿಕರಿಸಿವೆ. “ನನ್ನ ಮಕ್ಕಳು ಮತ್ತು ಕುಟುಂಬವೇ ನನ್ನ ಆಸ್ತಿ” ಎಂದು ಈ ಹಿಂದೆ ಹೇಳಿದ್ದ ಲೆಸ್ನರ್, ಈಗ ಸಂಪೂರ್ಣವಾಗಿ ಕುಟುಂಬದೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದರೊಂದಿಗೆ ರೆಸಲಿಂಗ ಇತಿಹಾಸದ ಒಂದು ರೋಚಕ ಅಧ್ಯಾಯಕ್ಕೆ ತೆರೆ ಬಿದ್ದಂತಾಗಿದೆ.












































