ವಾಷಿಂಗ್ಟನ್/ಟೆಹ್ರಾನ್: ಕಳೆದ 50 ದಿನಗಳಿಂದ ನಡೆಯುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ನಡುವೆ ಘೋಷಿಸಲಾಗಿದ್ದ ಎರಡು ವಾರಗಳ ಕದನ ವಿರಾಮ ಇಂದು ಮಧ್ಯರಾತ್ರಿ ಅಂತ್ಯಗೊಳ್ಳಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ವಿಸ್ತರಿಸಲು ನಿರಾಕರಿಸಿದ್ದು, ಇರಾನ್ ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡಿರುವುದು ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಹೊಸದೊಂದು ಒಪ್ಪಂದದ ಆಫರ್ ನೀಡಿದ್ದಾರೆ. 2015ರಲ್ಲಿ ಒಬಾಮಾ ಸರ್ಕಾರ ಮಾಡಿಕೊಂಡಿದ್ದ ಪರಮಾಣು ಒಪ್ಪಂದವು (JCPOA) ಅಮೆರಿಕದ ಭದ್ರತೆಗೆ ಮಾರಕವಾಗಿತ್ತು ಎಂದು ಟೀಕಿಸಿರುವ ಟ್ರಂಪ್, ಅದಕ್ಕಿಂತಲೂ ಉತ್ತಮವಾದ ಮತ್ತು ಕಠಿಣವಾದ ಒಪ್ಪಂದಕ್ಕೆ ಸಹಿ ಹಾಕುವಂತೆ ಇರಾನ್‌ಗೆ ಸೂಚಿಸಿದ್ದಾರೆ. “ಒಪ್ಪಂದಕ್ಕೆ ಸಹಿ ಹಾಕುವವರೆಗೂ ಇರಾನ್ ಬಂದರುಗಳ ಮೇಲಿನ ದಿಬ್ಬಂಧನವನ್ನು ತೆರವುಗೊಳಿಸುವುದಿಲ್ಲ, ನಮಗೆ ಯಾವುದೇ ಅವಸರವಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಈಗಾಗಲೇ ಅಮೆರಿಕ ನೌಕಾಪಡೆಯು ಇರಾನ್ 27 ಹಡಗುಗಳನ್ನು ತಡೆಹಿಡಿದಿದ್ದು, ‘ತೌಸ್ಕಾ’ ಎಂಬ ಹಡಗನ್ನು ವಶಪಡಿಸಿಕೊಂಡಿದೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಏರುಪೇರು:ವಿಶ್ವದ ಒಟ್ಟು ತೈಲ ವ್ಯಾಪಾರದ ಬಹುದೊಡ್ಡ ಭಾಗವು ಸಾಗುವ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ತನ್ನ ನಿಯಂತ್ರಣ ಸಾಧಿಸಿದೆ. ಆರಂಭದಲ್ಲಿ ವಾಣಿಜ್ಯ ಹಡಗುಗಳಿಗೆ ಅವಕಾಶ ನೀಡುವುದಾಗಿ ಇರಾನ್ ಹೇಳಿದ್ದರಿಂದ ತೈಲ ಬೆಲೆ ಶೇ. 10ರಷ್ಟು ಇಳಿಕೆಯಾಗಿತ್ತು. ಆದರೆ, ಅಮೆರಿಕ ತನ್ನ ದಿಗಂಧನವನ್ನು ಹಿಂಪಡೆಯದ ಕಾರಣ ಇರಾನ್ ಮತ್ತೆ ಈ ಮಾರ್ಗವನ್ನು ಬಂದ್ ಮಾಡಿದೆ. ಇದರಿಂದಾಗಿ ಸರಕು ಸಾಗಣೆ ಹಡಗುಗಳ ಮೇಲೆ ದಾಳಿಗಳು ನಡೆಯುತ್ತಿದ್ದು, ಹಡಗುಗಳು ಅರ್ಧ ದಾರಿಯಲ್ಲೇ ವಾಪಸ್ ಹೋಗುತ್ತಿವೆ. ಇದು ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ.
ಇತ್ತ ಇರಾನ್ ಕೂಡ ಅಮೆರಿಕದ ಬೇಡಿಕೆಗಳಿಗೆ ಬಗ್ಗುತ್ತಿಲ್ಲ. “ಅಮೆರಿಕ ತನ್ನ ಮೊಂಡುವಾದವನ್ನು ಬಿಟ್ಟು, ನೌಕಾ ದಿಗ್ವಂಧನವನ್ನು ತೆರವುಗೊಳಿಸುವವರೆಗೂ ನಾವು ಮಾತುಕತೆಗೆ ಬರುವುದಿಲ್ಲ” ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಫ್ಟಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಪ್ರಚೋದನಾಕಾರಿ ಕ್ರಮಗಳು ಶಾಂತಿ ಮಾತುಕತೆಗೆ ಅಡ್ಡಿಯಾಗಿವೆ ಎಂದು ಅವರು ಕಿಡಿಕಾರಿದ್ದಾರೆ.ಕಳೆದ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಮತ್ತು ಅನೇಕ ಸೇನಾ ಕಮಾಂಡರ್‌ಗಳು ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ಡೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಎರಡು ರಾಷ್ಟ್ರಗಳ ನಡುವೆ ಮತ್ತೆ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುವ ಲಕ್ಷಣಗಳು ದಟ್ಟವಾಗಿವೆ.












































