ಪಹಲ್ಗಾಮ್ ಉಗ್ರ ದಾಳಿಗೆ ಒಂದು ವರ್ಷ : ಬಲಿಯಾದ ಅಮಾಯಕರಿಗೆ ಶ್ರದ್ಧಾಂಜಲಿ ಅರ್ಪಿಸಿದ ಮೋದಿ

Picture of Savistara

Savistara

Bureau Report

ಭಾರತ ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ ಎಂದು ಸಂದೇಶ

ನವದೆಹಲಿ : ಪಹಲ್ಲಾಮ್ ಭಯೋತ್ಪಾದಕ ದಾಳಿಯಾಗಿ ಇಂದಿಗೆ (ಏ.22) ಒಂದು ವರ್ಷ ಪೂರ್ಣಗೊಂಡಿದೆ. ಹಿಂದೂ ಪ್ರವಾಸಿಗರನ್ನೇ ಹುಡುಕಿ ಹತ್ಯೆ ಮಾಡಿದ ಈ ಭಯೋತ್ಪಾದಕ ಕೃತ್ಯ ದೇಶದ ಜನಮಾನಸದಲ್ಲಿ ಎಂದಿಗೂ ಆರದ ಗಾಯವನ್ನು ಉಳಿಸಿದೆ. ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು, ಕಣ್ಣೀರು ಇನ್ನೂ ಹಸಿಯಾಗಿಯೇ ಉಳಿದಿದೆ. ನಮ್ಮ ನೆಲಕ್ಕೆ ನುಗ್ಗಿ ನಮ್ಮವರನ್ನೇ ಗುಂಡಿಕ್ಕಿ ಕೊಂದ ಉಗ್ರರ ಅಟ್ಟಹಾಸ. ಭಯೋತ್ಪಾದಕರನ್ನು ಸದೆಬಡಿಯಲು ಭಾರತ ಕೈಗೊಂಡ ದಿಟ್ಟ ಕ್ರಮ. ‘ಆಪರೇಷನ್ ಸಿಂದೂರ’ ಮತ್ತು ‘ಆಪರೇಷನ್ ಮಹಾದೇವ’ ಮೂಲಕ ಭಾರತೀಯ ಸೇನೆಯು ತೋರಿದ ಪರಾಕ್ರಮ. ಪ್ರತೀಕಾರದ ಕುದಿಯಲ್ಲಿ ಪಹಲ್ಲಾಮ್ ದಾಳಿಕೋರರನ್ನು ಹುಡುಕಿ ಸದೆಬಡಿದ ಚಿತ್ರಣಗಳು ಸ್ಮೃತಿಪಟಲದಲ್ಲಿ ಒಂದೊಂದಾಗಿ ತೆರೆದುಕೊಳ್ಳುತ್ತವೆ.ಭೀಕರ ಭಯೋತ್ಪಾದಕ ದಾಳಿಯ ಮೊದಲ ವಾರ್ಷಿಕ ದಿನದಂದು ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರ ಅಟ್ಟಹಾಸಕ್ಕೆ ಬಲಿಯಾದ ಅಮಾಯಕ ಜೀವಗಳನ್ನು ಸ್ಮರಿಸಿ ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ಇಡೀ ದೇಶವೇ ಭಾಗಿಯಾಗಿದೆ ಎಂದು ಹೇಳಿದ್ದಾರೆ.

ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ, ಕಳೆದ ವರ್ಷ ಈ ದಿನದಂದು ನಡೆದ ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಅಮಾಯಕ ಜೀವಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಅಪಾರ ನಷ್ಟವನ್ನು ನಿಭಾಯಿಸುತ್ತಿರುವ ದುಃಖಿತ ಕುಟುಂಬಗಳೊಂದಿಗೆ ನಾನು ಸದಾ ಇರುತ್ತೇನೆ ಎಂದು ಬರೆದಿದ್ದಾರೆ.ದಾಳಿಯ ನೆನಪಿನೊಂದಿಗೆ, ಭಯೋತ್ಪಾದನೆಯನ್ನು ಪೋಷಿಸುವ ಶಕ್ತಿಗಳಿಗೆ ಪ್ರಧಾನಿ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ, ಒಂದು ರಾಷ್ಟ್ರವಾಗಿ, ನಾವು ದುಃಖ ಮತ್ತು ದೃಢಸಂಕಲ್ಪದಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಭಾರತವು ಯಾವುದೇ ರೀತಿಯ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಎಂಬ ಸುಂದರ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ತೆರೆದ ಕಣಿವೆಯಲ್ಲಿ ಆನಂದಿಸುತ್ತಿದ್ದಾಗ ಇದ್ದಕ್ಕಿದ್ದಂತೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಆ ಪ್ರದೇಶಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದರು. ಈ ವೇಳೆ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ನಡೆಸಿದ ಉಗ್ರರು, ಹಿಂದೂಗಳನ್ನು ಹುಡುಕಿ ಕೊಂದರು. ಭಯೋತ್ಪಾದಕರ ದಾಳಿಗೆ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹಲವರು ಗಾಯಗೊಂಡರು. ಕಣ್ಣೆದುರೇ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತು. ಹೆಣ್ಣೂಬ್ಬಳು ತನ್ನ ಪತಿಯ ಮೃತದೇಹದ ಮುಂದೆ ಕುಳಿತು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.ಭಯೋತ್ಪಾದಕ ದಾಳಿಯ ಹೊಣೆಯನ್ನು ಪಾಕಿಸ್ತಾನದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಹೊತ್ತುಕೊಂಡಿದೆ. ಪಾಕಿಸ್ತಾನ ಮಾತ್ರ ಈ ದಾಳಿಯಲ್ಲಿ ತನ್ನದೇನೂ ಪಾತ್ರವಿಲ್ಲ ಅಂತ ನಾಟಕವಾಡಿತು. ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಯಾ ಕಮಾಂಡ‌ರ್ ಸಾಜಿದ್ ಜಾಟ್ ಸೇರಿದಂತೆ ಏಳು ಆರೋಪಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಯಿತು. ದಾಳಿಯ ಹಿಂದಿನ ಪಾಕ್ ಪಿತೂರಿಯನ್ನು ಸಹ ಎನ್‌ಐಎ ಬಹಿರಂಗಪಡಿಸಿತು.

ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತು. ಭಾರತ ಮತ್ತು ಪಾಕಿಸ್ತಾನ ನಡುವೆ 2025ರ ಮೇ 7ರಂದು ಸಂಘರ್ಷ ಪ್ರಾರಂಭವಾಯಿತು. ಉಭಯ ದೇಶಗಳು ಪರಸ್ಪರರ ಮೇಲೆ ಶಸ್ತ್ರಾಸ್ತ್ರ ಪ್ರಯೋಗ ಮಾಡಿದವು. ಪಾಕಿಸ್ತಾನದ 11ಕ್ಕೂ ಹೆಚ್ಚು ವಾಯುನೆಲೆಗಳು ಮತ್ತು ಸೇನಾ ನೆಲೆಗಳನ್ನು ಭಾರತ ಯಶಸ್ವಿಯಾಗಿ ಧ್ವಂಸಗೊಳಿಸಿತು. ಬ್ರಹ್ಮಸ್ ಕ್ಷಿಪಣಿಗಳನ್ನು ಬಳಸಿದ ಈ ತೀವ್ರ ದಾಳಿಯಲ್ಲಿ ಸರ್ಗೋಧಾ, ನೂರ್ ಖಾನ್, ಭೋಲಾರಿ, ಜಾಕೋಬಾಬಾದ್, ಸುಕ್ಕೂರ್, ಮತ್ತು ರಹೀಮ್ ಯಾರ್ ಖಾನ್‌ನಂತಹ ಪಾಕ್‌ನ ಪ್ರಮುಖ ನೆಲೆಗಳು ಉಡೀಸ್ ಆದವು. ಇದು ಪಾಕ್ ವಾಯುಪಡೆಯ ಮೂಲಸೌಕರ್ಯಕ್ಕೆ ದೊಡ್ಡ ಹೊಡೆತ ನೀಡಿದೆ.100ಕ್ಕೂ ಹೆಚ್ಚು ಉಗ್ರರು ಹತರಾದರು. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಗ್ಗೆ ಇಬ್ಬರು ಮಹಿಳಾ ಸೇನಾಧಿಕಾರಿಗಳು ವಿವರಣೆ ನೀಡುವ ಮೂಲಕ ದೇಶದ ಗಮನ ಸೆಳೆದರು. ಭಯೋತ್ಪಾದಕ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಮಹಿಳೆಯರಿಗೆ ಮಹಿಳಾಧಿಕಾರಿಗಳಿಂದಲೇ ಸಾಂತ್ವನ ಹೇಳಿಸಿದಂತಿತ್ತು ಈ ನಡೆ.

ಪಹಲ್ಲಾಮ್‌ನಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿ ಎಸ್ಕೆಪ್ ಆಗಿದ್ದ ಉಗ್ರರನ್ನು ಸದೆಬಡಿಯಲು ಭಾರತ ಕೈಗೊಂಡ ಕಾರ್ಯಾಚರಣೆಯೇ ‘ಆಪರೇಷನ್ ಮಹಾದೇವ’. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಡಚಿಗಾಮ್ ಅರಣ್ಯದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ, ಪಹಲ್ಲಾಮ್ ದಾಳಿಯ ರೂವಾರಿಗಳಾದ ಮೂವರು ಭಯೋತ್ಪಾದಕರನ್ನು ಹೊಡೆದು ಹಾಕಿದವು. ಸೇನೆಗೆ ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಸಂಸತ್‌ನಲ್ಲಿ ಪಹಲ್ಲಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ ಚರ್ಚೆ ನಡೆಯುತ್ತಿರುವಾಗಲೇ ಈ ಎನ್‌ಕೌಂಟರ್ ನಡೆದಿತ್ತು.

[t4b-ticker]
error: Content is protected !!