ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿನ ಸಂಘರ್ಷ ಹಾಗೂ ಯುದ್ಧದ ಹಿನ್ನೆಲೆಯಲ್ಲಿ ರಸಗೊಬ್ಬರ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಆಮದಿನಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರವು ರಸಗೊಬ್ಬರ ಖರೀದಿಗೆ ಎಫ್‌ಐಡಿ (ಫಾರ್ಮರ್ ಐಡಿ – ರೈತ ಗುರುತಿನ ಚೀಟಿ) ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡುವುದು ಮತ್ತು ಕೃತಕ ಅಭಾವ ಸೃಷ್ಟಿಸುವುದನ್ನು ತಡೆಯುವುದು ಈ ನಿಯಮದ ಮುಖ್ಯ ಉದ್ದೇಶ. ರೈತರು ಅತಿಯಾಗಿ ರಸಗೊಬ್ಬರ ಬಳಸುವುದನ್ನು ನಿಯಂತ್ರಿಸಲು ಮತ್ತು ವೈಜ್ಞಾನಿಕವಾಗಿ ಅಗತ್ಯವಿರುವಷ್ಟು ಮಾತ್ರ ಗೊಬ್ಬರ ವಿತರಿಸಲು ಸರ್ಕಾರ ಮುಂದಾಗಿದೆ.
ಕಚ್ಚಾ ವಸ್ತುಗಳ ಕೊರತೆ
ಯೂರಿಯಾ ಮತ್ತು ಡಿಎಪಿ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಹಾಗೂ ನೈಸರ್ಗಿಕ ಅನಿಲ ಹೆಚ್ಚಾಗಿ ಕತಾರ್ ಮತ್ತು ಸೌದಿ ಅರೇಬಿಯಾದಂತಹ ಕೊಲ್ಲಿ ದೇಶಗಳಿಂದ ಆಮದಾಗುತ್ತವೆ. ಪ್ರಸ್ತುತ ಯುದ್ಧದ ಸನ್ನಿವೇಶದಿಂದಾಗಿ ಈ ಪೂರೈಕೆಯಲ್ಲಿ ಅಡಚಣೆಯಾಗುವ ಆತಂಕವಿದೆ.
ವೈಜ್ಞಾನಿಕ ಹಂಚಿಕೆ:
ಎಫ್‌ಐಡಿ ಮೂಲಕ ರೈತರ ಬಳಿ ಇರುವ ಜಮೀನಿನ ಅಳತೆಗೆ ಅನುಗುಣವಾಗಿ, ಎಷ್ಟು ಪ್ರಮಾಣದ ಗೊಬ್ಬರ ಅಗತ್ಯವಿದೆಯೋ ಅಷ್ಟನ್ನು ಮಾತ್ರ ವಿತರಿಸಲು ಕೃಷಿ ಇಲಾಖೆ ನಿರ್ಧರಿಸಿದೆ
ಗೊಬ್ಬರದ ದಾಸ್ತಾನು ಸ್ಥಿತಿ:
ವರದಿಯ ಪ್ರಕಾರ, ರಾಜ್ಯಕ್ಕೆ ಈ ವರ್ಷ ಸುಮಾರು 30 ಲಕ್ಷ ಟನ್ ವಿವಿಧ ರಸಗೊಬ್ಬರಗಳ ಹಂಚಿಕೆಯಾಗಿದೆ. ಇದರಲ್ಲಿ ಶೇ. 35-40 ರಷ್ಟು (10-12 ಲಕ್ಷ ಮೆ.ಟನ್) ಯೂರಿಯಾ ಪಾಲಿದೆ. ಸದ್ಯಕ್ಕೆ ರಾಜ್ಯದಲ್ಲಿ 11.4 ಲಕ್ಷ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಮೂಲಗಳು ತಿಳಿಸಿವೆ.
ಕೃಷಿ ಇಲಾಖೆಯ ಸಲಹೆ:
ರೈತರು ಅತಿಯಾದ ಯೂರಿಯಾ ಬಳಕೆಯನ್ನು ಕಡಿಮೆ ಮಾಡಬೇಕು. ಒಂದು ಎಕರೆಗೆ ಸಾಮಾನ್ಯವಾಗಿ 1 ರಿಂದ 2 ಚೀಲಗಳ ಅಗತ್ಯವಿದ್ದರೂ, ಕೆಲವರು 4-5 ಚೀಲಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇದನ್ನು ತಡೆಯಲು ಎಫ್‌ಐಡಿ ವ್ಯವಸ್ಥೆ ಪೂರಕವಾಗಲಿದೆ.ಈ ಹೊಸ ನಿಯಮದ ಜಾರಿಯಿಂದಾಗಿ ಪಾರದರ್ಶಕತೆ ಬರಲಿದ್ದು, ಅರ್ಹ ರೈತರಿಗೆ ಸಕಾಲದಲ್ಲಿ ಗೊಬ್ಬರ ಸಿಗುವಂತಾಗಲಿದೆ ಎಂದು ಸರ್ಕಾರ ಆಶಿಸಿದೆ.












































