ವಾಷಿಂಗ್ಟನ್: ಹೋರ್ಮುಜ್ ಜಲಸಂಧಿಯ ಬಳಿ ಅಮೆರಿಕವಿಧಿಸಿರುವ ನೌಕಾ ದಿಗ್ವಂಧನವನ್ನು ಮೀರಿ ಸಾಗಲು ಯತ್ನಿಸಿದ ಇರಾನ್ ಧ್ವಜದ ಸರಕು ಹಡಗನ್ನು ಅಮೆರಿಕದ ನೌಕಾಪಡೆ ಯಶಸ್ವಿಯಾಗಿ ತಡೆದಿದೆ. ಅಮೆರಿಕದ ಯುದ್ಧನೌಕೆಯು ಈ ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿ, ಅದನ್ನು ತನ್ನ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.ಅಮೆರಿಕದ ನೌಕಾಪಡೆಯ ಗೈಡೆಡ್ ಮಿಸೈಲ್ ಡಿಸ್ಟ್ರಾಯರ್ ‘ಯುಎಸ್‌ಎಸ್ ಸ್ಪೂಯನ್ಸ್’ (USS Spruance) ಇರಾನ್ ‘ತೌಸ್ಕಾ’ (Touska) ಎಂಬ ಸರಕು ಹಡಗನ್ನು ತಡೆಹಿಡಿದಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಕಾರ, ಸುಮಾರು ಆರು ಗಂಟೆಗಳ ಕಾಲ ಎಚ್ಚರಿಕೆ ನೀಡಿದರೂ ಹಡಗು ನಿಲ್ಲದಿದ್ದಾಗ, ಗುಂಡಿನ ದಾಳಿ ನಡೆಸಿ ಹಡಗನ್ನು ನಿಲ್ಲಿಸಲಾಗಿದೆ. ಪ್ರಸ್ತುತ ಅಮೆರಿಕದ ಮರೀನ್ ಪಡೆಯು ಹಡಗನ್ನು ತನ್ನ ಹತೋಟಿಗೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.ಇತ್ತ ಈ ಘಟನೆಯನ್ನು ಇರಾನ್ ತೀವ್ರವಾಗಿ ಖಂಡಿಸಿದ್ದು, ಇದನ್ನು “ಸಮುದ್ರದ ದರೋಡೆ” ಎಂದು ಕರೆದಿದೆ. ಅಲ್ಲದೆ, ಅಮೆರಿಕವು ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇರಾನ್, ಇದಕ್ಕೆ ಶೀಘ್ರದಲ್ಲೇ ತಕ್ಕ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಕೆ ನೀಡಿದೆ.
ಈ ಘಟನೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದ್ದು, ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗಳು ಅನಿಶ್ಚಿತತೆಗೆ ಸಿಲುಕಿವೆ.ಕಳೆದ ವಾರದಿಂದ ಅಮೆರಿಕವು ಇರಾನ್‌ನ ಬಂದರುಗಳ ಮೇಲೆ ನೌಕಾ ದಿಗ್ಧಂಧನ ವಿಧಿಸಿದ್ದು, ಇದನ್ನು ಭೇದಿಸಲು ಯತ್ನಿಸಿದ ಮೊದಲ ಹಡಗು ಇದಾಗಿದ್ದು ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತಷ್ಟು ತಾರಕಕ್ಕೇರುವ ಭೀತಿ ಎದುರಾಗಿದೆ.












































