ನನ್ನ ಹಾಗೂ ರಾಮುಲು ನಡುವಿನ ಸ್ನೇಹ ಸಾಮಾನ್ಯವಾದುದ್ದಲ್ಲ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿ : ನನ್ನ ಮತ್ತು ಬಿ. ಶ್ರೀರಾಮುಲು ನಡುವೆ ಯಾರ ಮಧ್ಯಸ್ಥಿಕೆ ಬೇಕಾಗಿಲ್ಲ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.ಅವರ ಪುತ್ರ ಕಿರೀಟಿ ಅಭಿನಯದ ಚಲನಚಿತ್ರ ಜೂನಿಯರ್ ಸಿನಿಮಾ ಬಿಡುಗಡೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ವೈಮನಸ್ಸು ಶಮನ ಮಾಡಲು ದೆಹಲಿಗೆ ಕರೆದಿರುವ ಕುರಿತು ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮಿಬ್ಬರ ಮಧ್ಯೆ ಯಾರೂ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ಮತ್ತು ರಾಮುಲು ಸ್ನೇಹದ ಬಗ್ಗೆ ಈಗ ಮಾತನಾಡೋದು ಬೇಡ ಎಂದು ಹೇಳಿದ ಅವರು, ಯಾವುದೇ ವಿಚಾರದಲ್ಲಿ ಪ್ರೀತಿ ಅಭಿಮಾನ ಅನ್ನೋದು ಒಂದು ಘಟನೆಯಿಂದ ಬದಲಾವಣೆ ಆಗಲ್ಲ. ನಮ್ಮ ಹಾಗೂ ರಾಮುಲು ನಡುವಿನ ಸ್ನೇಹ ಸಾಮಾನ್ಯವಾದುದ್ದಲ್ಲ, ಹದಿನೈದು ಹದಿನಾರು ವಯಸ್ಸಿನವರಾಗಿದ್ದಾಗಿಂದ ಸ್ನೇಹ ಇದೆ. ನಲವತ್ತು ವರ್ಷದಿಂದ ಜೊತೆಗಿದ್ದೇವೆ. ಶೀಘ್ರದಲ್ಲಿ ರಾಮುಲು ನಾನು ಇಬ್ಬರು ಒಟ್ಟಿಗೆ ಜೂನಿಯರ್ ಸಿನಿಮಾ ನೋಡ್ತೇವೆ ಎಂದು ಹೇಳಿದರು.ಸಹೋದರ ಸೋಮಶೇಖರ್ ರೆಡ್ಡಿ, ಪತ್ನಿ ಅರುಣಾ, ಮಗ ಕಿರಿಟಿ ಜೊತೆಗೆ ಸಿನಿಮಾ ನೋಡಿದ ಜನಾರ್ದನ ರೆಡ್ಡಿ ಸಿನಿಮಾ ಅದ್ಭುತವಾಗಿದೆ ಎಂದಿದ್ದಾರೆ. ಕಿರೀಟಿಗೆ ಚಿಕ್ಕವನಿದ್ದಾಗಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇತ್ತು. ಮನೆಯಲ್ಲಿ ಎಷ್ಟೇ ರಾಜಕೀಯ ಇದ್ರೂ, ಮಗ ಸಿನಿಮಾ ಬಿಟ್ಟರೆ ಯಾವುದರ ಬಗ್ಗೆಯೂ ಕಾನ್ಸಂಟ್ರೇಶನ್ ಮಾಡುತ್ತಿರಲಿಲ್ಲ. ಕಿರೀಟಿ ಪುನೀತ್ ರಾಜ್ಕುಮಾರ್ ಮತ್ತು ಎನ್‌ಟಿಆರ್ ಅವರನ್ನು ನೋಡಿಕೊಂಡು ಬೆಳೆದಿದ್ದಾನೆ. ಜೂನಿಯರ್ ಸಿನಿಮಾ ಯಶಸ್ವಿಯಾಗಲಿದೆ ಎಂದು ಈ ಸಂದರ್ಭದಲ್ಲಿ ಅವರು ಭರವಸೆ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿಯೊಂದಿಗೆ ಯಾವುದೇ ಗೊಂದಲವಿಲ್ಲ : ತಮ್ಮ ಹಾಗೂ ಗಾಲಿ ಜನಾರ್ದನ ರೆಡ್ಡಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿ, ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಶ್ರೀರಾಮುಲು (ಜುಲೈ -17-25) ಹೇಳಿದ್ದರು.ಈ ಕುರಿತು ಗದಗದಲ್ಲಿ ಮಾತನಾಡಿದ್ದ ಅವರು, ನನ್ನ ಹಾಗೂ ಜನಾರ್ದನ ರೆಡ್ಡಿ ನಡುವೆ ಗೊಂದಲವೇ ಇಲ್ಲ. ಆಗಿನ ಒಂದು ಘಟನೆಯಲ್ಲಿ ಇಬ್ಬರೂ ಬಾಯಿ ಮಾಡಿಕೊಂಡಿದ್ದು ನಿಜ. ಆದರೆ ಅದೆಲ್ಲವನ್ನೂ ಮರೆತಿದ್ದೇವೆ. ಇಬ್ಬರೂ ಮಾತನಾಡಿದ್ದು ತಪ್ಪಾಗಿತ್ತು. ಆದರೆ ಈಗ ಯಾವುದೇ ಸ್ವಾರ್ಥವಿಲ್ಲದೇ ಪಕ್ಷದ ಒಳಿತಿಗಾಗಿ ಒಂದಾಗುತ್ತೇವೆ ಎಂದು ಹೇಳಿದ್ದರು.’ನಾನಿರಲಿ, ರೆಡ್ಡಿಯವರಿರಲಿ, ಇನ್ಯಾರೇ ಇರಲಿ, ಪಕ್ಷದ ಹಿತವೇ ಮುಖ್ಯ. ಜನರಲ್ಲಿ ಭರವಸೆ ಮೂಡಿಸಲು, ಪಕ್ಷವನ್ನು ಬೆಳೆಸಲು ಎಲ್ಲರೂ ಒಗ್ಗಟ್ಟಾಗಬೇಕು’ ಎಂದು ಕರೆ ನೀಡಿದ್ದರು.’ಅಂದಿನ ಪರಿಸ್ಥಿತಿಯಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾದವು. ಆದರೆ, ಈಗ ಎಲ್ಲವನ್ನೂ ಮರೆತು, ಮತ್ತೆ ಅಧಿಕಾರಕ್ಕೆ ಬರಬೇಕಾದರೆ ರಾಜ್ಯದ ಎಲ್ಲ ಬಿಜೆಪಿ ನಾಯಕರನ್ನೂ ಒಂದುಗೂಡಿಸುತ್ತೇವೆ. 100ರಷ್ಟು ಎಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.














































