ಲಕ್ಷಾಂತರ ಭಕ್ತರ ಆರಾಧ್ಯ ದೈವ, ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಪವಿತ್ರ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರಸ್ತುತ ತಲೆದೋರಿರುವ ಆಡಳಿತಾತ್ಮಕ ಅಸಡ್ಡೆ ಮತ್ತು ಭಕ್ತರ ಹಕ್ಕುಗಳ ದಮನದ ವಿರುದ್ಧ ಅತ್ಯಂತ ತೀವ್ರ ಆಕ್ರೋಶದೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.
ಜೂ 19 ರಿಂದ ಇಂದಿನವರೆಗೆ (20.06.2026) ಕೇವಲ ಒಂದು ಬಾಟಲಿ ತೀರ್ಥಕ್ಕಾಗಿ ದೇವಸ್ಥಾನದ ಆವರಣದಲ್ಲಿ ನಿನ್ನೆ ಇವತ್ತು ಕಾದು ಕುಳಿತಿದ್ದರೂ, ತೀರ್ಥವನ್ನು ನೀಡದೆ ಭಕ್ತರನ್ನು ಸತಾಯಿಸಲಾಗಿದೆ. ದೇವಾಲಯದಲ್ಲಿ ಪ್ರಾರ್ಥನೆ ಮತ್ತು ವಿಶೇಷ ಸೇವೆಗಳನ್ನು ಸಲ್ಲಿಸಿದ ಭಕ್ತರಿಗೆ ಮುಂದಿನ 12 ದಿನಗಳ ಕಾಲ ನಿಯಮದಂತೆ ಸೇವಿಸಲು ‘ಮೂಲಪ್ರಸಾದ’ವನ್ನು ನೀಡಲಾಗುತ್ತದೆ. ಆದರೆ, ಈ ಪ್ರಸಾದವನ್ನು ಸ್ವೀಕರಿಸಲು ಅತ್ಯಗತ್ಯವಾಗಿ ಬೇಕಾದ ಪವಿತ್ರ ತೀರ್ಥವನ್ನೇ ಒದಗಿಸದ ದೇವಸ್ಥಾನದ ಈ ನಡೆ ಭಕ್ತ ಸಮುದಾಯಕ್ಕೆ ಬಗೆದ ದ್ರೋಹವಾಗಿದೆ.
ಆಡಳಿತಧಿಕಾರಿ (E.O) ನಿರ್ಲಕ್ಷ್ಯ ಮತ್ತು ಉಡಾಫೆಯ ವರ್ತನೆ ತೀರ್ಥದ ಕೊರತೆಯ ಬಗ್ಗೆ ಪ್ರಶ್ನಿಸಿದರೆ, ಅಲ್ಲಿನ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಭಕ್ತರಿಗೆ ಸೌಜನ್ಯದಿಂದ ಉತ್ತರಿಸುವ ಬದಲು ಅತ್ಯಂತ ಬೇಜವಾಬ್ದಾರಿಯ ಹಾಗೂ ಉಡಾಫೆಯ ಮಾತುಗಳನ್ನಾಡಿ ಅಪಮಾನಿಸುತ್ತಿದ್ದಾರೆ.ದೂರದ ಊರುಗಳಿಂದ ಕಷ್ಟಪಟ್ಟು ಬಂದು, ಶ್ರದ್ಧಾ-ಭಕ್ತಿಯಿಂದ ಸೇವೆ ಸಲ್ಲಿಸುವ ಭಕ್ತರ ಮನಸ್ಸಿಗೆ ಈ ಧೋರಣೆ ತೀವ್ರ ನೋವುಂಟು ಮಾಡಿದೆ. ಪ್ರಸಾದದ ಸಂಪೂರ್ಣ ವಿಧಿವಿಧಾನಕ್ಕೆ ಭಂಗ ತಂದಿರುವುದು ಭಕ್ತರ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ.
ರಾಜ್ಯದಲ್ಲೇ ನಂಬರ್ ಒನ್ ಆದಾಯವಿರುವ ಶ್ರೀಮಂತ ದೇವಾಲಯಕ್ಕೆ ಬರುವ ಭಕ್ತರಿಗೆ ಕನಿಷ್ಠ ಒಂದು ತೀರ್ಥದ ಬಾಟಲಿಯನ್ನು ಸಕಾಲದಲ್ಲಿ ವಿತರಿಸಲು ಸಾಧ್ಯವಿಲ್ಲ ಎಂದರೆ, ಇದು ಆಡಳಿತ ಮಂಡಳಿಯ ಸಂಪೂರ್ಣ ದಿವಾಳಿತನ ಮತ್ತು ಅಸಮರ್ಥತೆಯನ್ನು ತೋರಿಸುತ್ತದೆ. ಭಕ್ತರ ಕಾಣಿಕೆಯ ಹಣದಲ್ಲಿ ವೈಭವದ ಆಡಳಿತ ನಡೆಸುವವರಿಗೆ ಭಕ್ತರ ಮೂಲಭೂತ ಧಾರ್ಮಿಕ ಅಗತ್ಯಗಳ ಕಡೆಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ದುರಂತ.ಕ್ಷೇತ್ರದ ಪಾವಿತ್ರ್ಯತೆ ಮತ್ತು ಭಕ್ತರ ನಂಬಿಕೆಯನ್ನು ಹರಾಜಿಗಿಟ್ಟಿರುವ ಈ ಆಡಳಿತ ಅಧಿಕಾರಿಯ ಅಸಡ್ಡೆ ಹಾಗೂ ವ್ಯವಸ್ಥಾಪನಾ ಸಮಿತಿಯ ನಿರ್ಲಕ್ಷ್ಯದ ವಿರುದ್ಧ ತಕ್ಷಣವೇ ಉನ್ನತ ಮಟ್ಟದ ಶಿಸ್ತುಕ್ರಮ ಕೈಗೊಳ್ಳಬೇಕು. ಭಕ್ತರಿಗೆ ಆಗಿರುವ ಮಾನಸಿಕ ನೋವಿಗೆ ಆಡಳಿತ ಮಂಡಳಿಯೇ ನೇರ ಹೊಣೆಯಾಗಿದ್ದು, ಇಂದೇ ತೀರ್ಥ ವಿತರಣೆಯ ಗೊಂದಲವನ್ನು ಬಗೆಹರಿಸಿ ಸೂಕ್ತ ಹಾಗೂ ವ್ಯವಸ್ಥಿತ ಸೌಲಭ್ಯವನ್ನು ಕಲ್ಪಿಸಿಕೊಡಬೇಕಾಗಿ ಭಕ್ತಾದಿಗಳು ಆಗ್ರಹಿಸಿದ್ದಾರೆ











































